ಅಕ್ರಮ ಆಸ್ತಿ ಗಳಿಕೆ ಆರೋಪ: ಸಚಿವ ವಿ.ಸೋಮಣ್ಣ ವಿರುದ್ಧ ಕೋರ್ಟ್ ನಿಂದ ಸಮನ್ಸ್ ಜಾರಿ
ಬೆಂಗಳೂರು, ಮಾ.22: ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಸಚಿವ ವಿ.ಸೋಮಣ್ಣ ವಿರುದ್ಧ ನಗರದ ಜನಪ್ರತಿನಿಧಿಗಳ ಕೋರ್ಟ್ ಎ.16ರಂದು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
2013ರಲ್ಲಿ ರಾಮಕೃಷ್ಣ ಎಂಬವರು ಖಾಸಗಿ ದೂರು ದಾಖಲಿಸಿದ್ದರು. ಈ ಬಗ್ಗೆ ಕೋರ್ಟ್ ತನಿಖೆ ನಡೆಸಿ ವರದಿ ನೀಡುವಂತೆ ಎಸಿಬಿ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ, ಎಸಿಬಿ ಅಧಿಕಾರಿಗಳು ಆದಾಯ ಮೀರಿ ಆಸ್ತಿ ಗಳಿಸಿಲ್ಲವೆಂದು ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ರಿಪೋರ್ಟ್ ಅನ್ನು ಕೋರ್ಟ್ ತಿರಸ್ಕರಿಸಿದೆ.
ವಿ.ಸೋಮಣ್ಣ ಅವರು ಶಾಸಕರಾಗುವ ಮೊದಲಿನ ಆದಾಯ, ನಂತರದ ಆದಾಯ, ಗಳಿಸಿದ ಆಸ್ತಿಯ ಸೂಕ್ತ ವಿವರಣೆಯನ್ನು ಪೊಲೀಸರು ನೀಡಿಲ್ಲ. ಹೀಗಾಗಿ ಅಸಮರ್ಪಕ ತನಿಖೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಸಮನ್ಸ್ ಜಾರಿಗೆ ನ್ಯಾ. ಬಿ.ಜಯಂತ್ ಕುಮಾರ್ ಆದೇಶ ನೀಡಿದ್ದಾರೆ.
1974ರಿಂದ 1994ರವರೆಗೆ ಸೋಮಣ್ಣ ಮತ್ತು ಅವರ ಕುಟುಂಬದ ಒಟ್ಟು ಆದಾಯ 86, 767 ರೂಪಾಯಿ. ಜನತಾ ಬಜಾರ್‌ನಲ್ಲಿ ಒಬ್ಬ ಸಾಮಾನ್ಯ ನೌಕರರಾಗಿದ್ದ ಸೋಮಣ್ಣ ಅವರು ಪಾಲಿಕೆ ಸದಸ್ಯರಾಗಿ, ಶಾಸಕರಾಗಿ, ಸಚಿವರಾಗಿ ಬೇರೆ ಬೇರೆ ಹುದ್ದೆಗಳಲ್ಲಿದ್ದುಕೊಂಡು ತಮ್ಮ ಪ್ರಭಾವ ಬಳಸಿ ಸುಮಾರು 100ಕೋಟಿಗೂ ಅಧಿಕ ಅಕ್ರಮ ಆಸ್ತಿ ಗಳಿಸಿದ್ದಾರೆ. ಹೀಗಾಗಿ, ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ರಾಮಕೃಷ್ಣ ಖಾಸಗಿ ದೂರು ದಾಖಲು ಮಾಡಿದ್ದರು.