ಅಧಿಕಾರಿಗಳೇನು ದೇವಲೋಕದಿಂದ ಬಂದಿದ್ದಾರೆಯೇ?: ಸಚಿವ ಎಸ್.ಟಿ.ಸೋಮಶೇಖರ್
ಬೆಂಗಳೂರು, ಮಾ.22: ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ವಿವಿಧ ಯೋಜನೆಗಳಲ್ಲಿ ಅರಣ್ಯ ಭೂಮಿ ಬಂದರೆ ಇಲಾಖೆಯ ಅಧಿಕಾರಿಗಳು ವಿನಾಕಾರಣ ಅಡ್ಡಿಪಡಿಸುತ್ತಿದ್ದಾರೆ. ಇವರೇನು ದೇವಲೋಕದಿಂದ ಇಳಿದು ಬಂದವರಂತೆ ವರ್ತಿಸುತ್ತಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ಮಂಗಳವಾರ ವಿಧಾನಪರಿಷತ್ತಿನ ಕಲಾಪದಲ್ಲಿ ಕಾಂಗ್ರೆಸ್‍ನ ಎಂ.ಎಲ್. ಅನಿಲ್‍ಕುಮಾರ್ ಪ್ರಶ್ನೆಗೆ ಉತ್ತರಿಸಿದ ಅವರು, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಹೇಗಾದರೂ ಮಾಡಿ ಮನವೊಲಿಸಬಹುದು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಮನವೊಲಿಸುವುದು ಕಷ್ಟ ಸಾಧ್ಯ. ಅಲ್ಲಿರುವ ಅಧಿಕಾರಿಗಳು ದೇವಲೋಕದಿಂದ ಬಂದ ರೀತಿ ವರ್ತಿಸುತ್ತಾರೆ ಎಂದರು.
ಕೋಲಾರ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಸಂಬಂಧ 30 ಎಕರೆ ಜಮೀನು ವರ್ಗಾಯಿಸಿ ಅದರ ಬದಲಿಗೆ ವಕ್ಕಲೇರಿ ಹೋಬಳಿಯ ಕಪರಸಿದ್ದನಹಳ್ಳಿಯಲ್ಲಿ 17 ಎಕರೆ 10 ಗುಂಟೆ, ಮಡೇಹಳ್ಳಿಯಲ್ಲಿ 12 ಎಕರೆ 30 ಗುಂಟೆ ಸೇರಿದಂತೆ ಒಟ್ಟು 30 ಎಕರೆ ಜಮೀನನ್ನು ಕೃಷಿ ಮಾರುಕಟ್ಟೆ ಸಮಿತಿ ವರ್ಗಾಯಿಸಲಾಗುವುದು. ಇದರ ಬದಲಿಗೆ ಕೋಲಾರ ತಾಲೂಕಿನ ಹೋಳೂರು ಹೋಬಳಿಯ ನಾಯಕರಹಳ್ಳಿ ಗ್ರಾಮದಲ್ಲಿ 18.03 ಹೆಕ್ಟೇರ್ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲು 2008 ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ.
ಆದರೆ, ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇಲ್ಲದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ವರ್ಗಾಯಿಸಲು ಮಂಜೂರಾತಿ ಮತ್ತು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಕೇಂದ್ರ ಸರಕಾರದ ಜತೆ ಚರ್ಚಿಸಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋಲಾರ ಎಪಿಎಂಸಿ ಅತಿದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಅದಕ್ಕೆ ಅಗತ್ಯ ಇರುವ ಜಮೀನು ವಶಪಡಿಸಿಕೊಳ್ಳುವ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ರೈತ ಸಂಜೀವಿನಿ ಅಪಘಾತ ವಿಮಾಯೋಜನೆಯಡಿ ಮರಣ ಹೊಂದಿದ ಫಲಾನುಭವಿಗಳಿಗೆ 75 ಸಾವಿರದಿಂದ 1 ಲಕ್ಷರೂಪಾಯಿ ವರೆಗೆ ಮರಣ ಪರಿಹಾರ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಈ ಹಿಂದೆ ಜಾರಿಯಲ್ಲಿದ್ದ ಬೆಳೆ ಸಾಲ ಮನ್ನಾ ಯೋಜನೆಯಲ್ಲಿ ನೀಡಿರುವ ಮೊತ್ತ ಕಡಿಮೆಯಾಗಿದ್ದು, 361.67 ಕೋಟಿ ಹೆಚ್ಚುವರಿ ಅನುದಾನ ಒದಗಿಸುವಂತೆ ಹಾಗೂ ಬೆಳೆ ಸಾಲಕ್ಕಾಗಿ ಬಡ್ಡಿ ಸಹಾಯಧನ ಯೋಜನೆಯಲ್ಲಿ ನೀಡಿರುವ 378.07 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಒದಗಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅವರು ಹೇಳಿದರು.