×
Ad

ಬೆಲೆ ಏರಿಕೆ ವಿರೋಧಿಸಿ ಪಿಕ್ ಪಾಕೆಟ್ ಸರಕಾರದ ವಿರುದ್ಧ ಹೋರಾಟ: ಡಿ.ಕೆ.ಶಿವಕುಮಾರ್

Update: 2022-03-22 19:32 IST

ಕಲಬುರಗಿ, ಮಾ.22: ಪೆಟ್ರೋಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಬಿಜೆಪಿ ಮತ್ತೆ ಜನರ ಪಿಕ್ ಪಾಕೆಟ್ ಮಾಡಲು ಆರಂಭಿಸಿದೆ. ಚುನಾವಣೆ ನಡೆಯುವಾಗ ಸುಮ್ಮನಿದ್ದರು. ಚುನಾವಣೆ ಮುಗಿದ ನಂತರ ಮತ್ತೆ ಬೆಲೆ ಹೆಚ್ಚಿಸಿದ್ದಾರೆ. ಇಷ್ಟಾದರೂ ಮತದಾರ ಅವರಿಗೆ ಮತ ಹಾಕುತ್ತಿದ್ದಾನೆ. ಎಲ್ಲರಿಗೂ ಒಂದು ತಾಳ್ಮೆ ಇರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಗಾರಿದರು.

ಮಂಗಳವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಆದರೆ ವೆಚ್ಚ ಡಬಲ್ ಆಗಿದೆ. ಯಾರ ಆದಾಯವೂ ಡಬಲ್ ಆಗಿಲ್ಲ. ಬೆಲೆ ಏರಿಕೆ ವಿರೋಧಿಸಿ ಪಿಕ್ ಪಾಕೆಟ್ ಸರಕಾರದ ವಿರುದ್ಧ ವ್ಯಾಪಕ ಕಾರ್ಯಕ್ರಮ ರೂಪಿಸಿ ಅದನ್ನು ಶೀಘ್ರದಲ್ಲೇ ಪ್ರಕಟಿಸುತ್ತೇನೆ ಎಂದರು.

ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ ನೀವು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಳಕ್ಕೆ ಅವಕಾಶ ನೀಡಬಾರದು. ಡಬಲ್ ಇಂಜಿನ್ ಸರಕಾರ ಹೆಚ್ಚಿಸುತ್ತಿರುವ ಬೆಲೆ ಏರಿಕೆ ತಡೆಯಲು ರಾಜ್ಯ ಸರಕಾರವೇ ಸಬ್ಸಿಡಿಯನ್ನು ನೀಡಿ ನಿಯಂತ್ರಣ ಮಾಡಬೇಕು. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಬಿಡಿಎ ದಲ್ಲಾಳಿಗಳ ಮೇಲೆ ದಾಳಿ ಮಾಡುವಷ್ಟು ಭ್ರಷ್ಟಾಚಾರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ ಸರಕಾರ ಭ್ರಷ್ಟಾಚಾರವನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ. ನಮ್ಮ ಪ್ರಿಯಾಂಕ್ ಖರ್ಗೆ ಅವರು ಮಾಧ್ಯಮಗೋಷ್ಠಿ ನಡೆಸಿ ಬಡವರಿಗೆ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ದಲಿತರ ವಿವಿಧ ನಿಗಮಗಳಲ್ಲಿ ಕೊಳವೆ ಬಾವಿ ಕೊರೆದುಕೊಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಡಿಗೆ ಸುಮಾರು 300 ರೂ.ಲೆಕ್ಕದಲ್ಲಿ 90 ಸಾವಿರ ರೂ. ಮೊತ್ತದ ಕೊಳವೆ ಬಾವಿ ನಿರ್ಮಾಣ ಕಾಮಗಾರಿಯ ಮೊತ್ತವನ್ನು ಸುಮಾರು 1.80 ಲಕ್ಷಕ್ಕೆ ಅಂದರೆ ಡಬಲ್ ಮಾಡಿ ಗುತ್ತಿಗೆದಾರರಿಗೆ ನೀಡಲಾಗಿದೆ. ಆ ಮೂಲಕ ಈ ಸರಕಾರ  ಭ್ರಷ್ಟಾಚಾರದಲ್ಲಿ ಶೇ.40 ರಿಂದ 100ಕ್ಕೆ ಭಡ್ತಿ ಪಡೆದಿದೆ ಎಂದರು.
ರೈತನ ಕೊಳವೆ ಬಾವಿಯಲ್ಲಿ ಶೇ.100ರಷ್ಟು  ಭ್ರಷ್ಟಾಚಾರ ಮಾಡುತ್ತಿದ್ದಾರೆ. ಗುತ್ತಿಗೆದಾರರಿಂದ ಶೇ.40ರಷ್ಟು ಲಂಚ ಪಡೆಯುತ್ತಿದ್ದಾರೆ. ಮೊನ್ನೆ ಮಾಧ್ಯಮದಲ್ಲಿ ಆರೋಗ್ಯ ಇಲಾಖೆ ಅಕ್ರಮದ ಬಗ್ಗೆ ವರದಿ ಬಂದಿದೆ. ರಾಜ್ಯ ಸರಕಾರದ  ಭ್ರಷ್ಟಾಚಾರಕ್ಕೆ ಪ್ರಧಾನಿ ಮೋದಿ ಅವರೇ ಅತ್ಯುನ್ನತ ಪ್ರಶಸ್ತಿಯನ್ನು ನೀಡಬೇಕಿದೆ. ಎಲ್ಲರೂ ಸೇರಿ  ಭ್ರಷ್ಟಾಚಾರ ಮಾಡುತ್ತಿದ್ದಾರೆ' ಎಂದು ಶಿವಕುಮಾರ್ ದೂರಿದರು.

ಡಿಜಿಟಲ್ ಸದಸ್ಯತ್ವ ಅಭಿಯಾನ: ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಡಿಜಿಟಲ್ ಸದಸ್ಯತ್ವ ಅಭಿಯಾನಆರಂಭಿಸಿದೆ.ನೋಂದಣಿದಾರರನ್ನು ನೇಮಕ ಮಾಡಿ ಮತದಾರರ ಗುರುತಿನ ಚೀಟಿ, ದೂರವಾಣಿ ಸಂಖ್ಯೆ ಪಡೆದು 5 ರೂ. ಶುಲ್ಕದೊಂದಿಗೆ ಸದಸ್ಯತ್ವ ನೀಡಲಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ 25 ಲಕ್ಷ ಸದಸ್ಯತ್ವ ಮಾಡಲಾಗಿದ್ದು, ಮಾ.31ರ ವರೆಗೆ ಈ ಅಭಿಯಾನ ನಡೆಯಲಿದೆ. ಚುನಾವಣಾ ಆಯೋಗದ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರು ಪ್ರಾವಿಷನ್ ಸದಸ್ಯತ್ವ ಪಡೆದಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದು ಶಿವಕುಮಾರ್ ತಿಳಿಸಿದರು.

ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯಿಂದ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೂ ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದ್ದು, ಅದರ ಭಾಗವಾಗಿ ಪಿಆರ್‍ಓಗಳು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಆ ಮೂಲಕ ನೀವು ಅಧಿಕಾರಕ್ಕೆ ಬರಬೇಕು ಎಂದು ಇಚ್ಛಿಸುವವರು ಬ್ಲಾಕ್ ಮಟ್ಟದಲ್ಲಿ ಜವಾಬ್ದಾರಿಯಿಂದ ಸದಸ್ಯತ್ವ ನೋಂದಣಿ ಅಭಿಯಾನ ಮಾಡಬೇಕು. ಜುಲೈ 21ರಿಂದ ಆಗಸ್ಟ್ 20ರವರೆಗೂ  ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರು ಜಿ23 ಮಾಡಿಕೊಂಡು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಯಾವ ನಾಯಕರೂ ಪಕ್ಷದ ವಿರುದ್ಧ ಮಾತನಾಡಿಲ್ಲ. ಕಾಂಗ್ರೆಸ್ ಪಕ್ಷ ಗಾಂಧಿ ನಾಯಕತ್ವದಲ್ಲಿ ಕಷ್ಟಕಾಲದಲ್ಲಿ ನಮ್ಮನ್ನು ಉಳಿಸಿದೆ. ಸೀತಾರಾಮ್ ಕೇಸರಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಶರದ್ ಪವಾರ್, ಮಮತಾ ಬ್ಯಾನರ್ಜಿ ಅವರೆಲ್ಲರೂ ಪಕ್ಷ ತ್ಯಜಿಸಿದಾಗ ನಾವೆಲ್ಲರೂ ಹೋಗಿ ಸೋನಿಯಾ ಗಾಂಧಿ ಅವರಿಗೆ ಅಧ್ಯಕ್ಷೆಯಾಗುವಂತೆ ಮನವಿ ಮಾಡಿದೆವು. ಅವರ ನಾಯಕತ್ವದಲ್ಲಿ ಪಕ್ಷ ಸಂಘಟಿಸಿ, ಅಧಿಕಾರಕ್ಕೆ ತರಲಾಯಿತು ಎಂದರು.

ಕರ್ನಾಟಕ ಸೇರಿದಂತೆ ರಾಷ್ಟ್ರಾದ್ಯಂತ 'ಗಾಂಧಿ ಕುಟುಂಬವಿಲ್ಲದೆ, ಕಾಂಗ್ರೆಸ್ ಪಕ್ಷ ಇಲ್ಲ' ಎಂಬ ಒಂದೇ ಘೋಷವಾಕ್ಯವಿದೆ'. ಸೋನಿಯಾಗಾಂಧಿ ಅವರಿಗೆ ಪ್ರಧಾನಮಂತ್ರಿ ಆಗುವ ಅವಕಾಶ ಸಿಕ್ಕಾಗ ದೇಶದ ಹಿತಕ್ಕಾಗಿ ಆ ಅಧಿಕಾರವನ್ನು ತ್ಯಾಗ ಮಾಡಿ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ನೀಡಲಾಯಿತು. ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಮಾಡಲು ಶ್ರಮಿಸಿದ್ದಾರೆ. ಎರಡು ಬಾರಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ ಅವರೆಲ್ಲರೂ ಅಧಿಕಾರ ಅನುಭವಿಸಿದ್ದಾರೆ. ಈಗ ಯಾರು ಕೂಡ ಮಾತಮಾಡುತ್ತಿಲ್ಲ, ಮಾತನಾಡುವ ಅಗತ್ಯವೂ ಇಲ್ಲ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News