ಮೇಕೆದಾಟು: ಕಾನೂನು ತಜ್ಞರ ಜೊತೆ ಚರ್ಚಿಸಿ ಬುಧವಾರ ಸದನದಲ್ಲಿ ನಿರ್ಣಯ ಮಂಡನೆ; ಮುಖ್ಯಮಂತ್ರಿ ಬೊಮ್ಮಾಯಿ

Update: 2022-03-22 14:34 GMT

ಬೆಂಗಳೂರು, ಮಾ. 22: ‘ಮೇಕೆದಾಟು ಅಣೆಕಟ್ಟು ನಿರ್ಮಿಸುವ ಸಂಬಂಧದ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸರಕಾರ ವಿಧಾನಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ನಾಳೆ(ಮಾ.23) ಸದನದಲ್ಲಿ ತಮಿಳುನಾಡು ಸರಕಾರದ ಕ್ರಮ ಖಂಡಿಸಿ ನಿರ್ಣಯವನ್ನು ಮಂಡಿಸಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಹಿರಿಯ ಸದಸ್ಯ ಎಚ್.ಕೆ.ಪಾಟೀಲ್, ‘ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನಿತರ ಸದಸ್ಯರು ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ‘ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಿದ್ದು, ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ, ಯೋಜನೆ ಅನುಷ್ಟಾನ ಮಾಡೇ ತೀರುತ್ತೇವೆ' ಎಂದು ಸ್ಪಷ್ಟಪಡಿಸಿದರು.

‘ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಪಡೆಯುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ನಡೆದಿದ್ದು, ಅಧಿವೇಶನ ಮುಗಿದ ನಂತರ ದಿಲ್ಲಿತೆ ತೆರಳಿ, ಮೇಕೆದಾಟು ಯೋಜನೆಗೆ ಅನುಮತಿ ಪಡೆಯುತ್ತೇವೆ. ಮೇಕೆದಾಟು ಯೋಜನೆ ರಾಜ್ಯದಲ್ಲಿ ನಮಗೆ ಹಂಚಿಕೆಯಾಗಿರುವ ನೀರಿನ ಪರಿಮಿತಿಯಲ್ಲೇ ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ. ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದ್ದು, ಯೋಜನೆ ಅನುಷ್ಠಾನದಲ್ಲಿ ಕಾವೇರಿ ನ್ಯಾಯ ಮಂಡಳಿ ಆದೇಶದ ಉಲ್ಲಂಘನೆಯಾಗುವುದಿಲ್ಲ' ಎಂದು ಅವರು ಹೇಳಿದರು.

‘ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ಅನ್ಯಾಯ ಆಗುವುದಿಲ್ಲ. ಅವರಿಗೆ ಸಾಮಾನ್ಯ ವರ್ಷದಲ್ಲಿ ನೀಡಬೇಕಿರುವ 177.25 ಟಿಎಂಸಿ ನೀರನ್ನು ನೀಡಲು ನಾವು ಬದ್ಧ. ಆದರೆ, ನಮ್ಮ ಪಾಲಿನ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸುತ್ತಿದ್ದೇವೆ. ತಮಿಳುನಾಡು ಅಡ್ಡಿಪಡಿಸುವುದು ಖಂಡನೀಯ' ಎಂದು ಬಸವರಾಜ ಬೊಮ್ಮಾಯಿ ಆಕ್ಷೇಪಿಸಿದರು.

ಪ್ರಚೋದನೆ ಸಹಿಸಲು ಸಾಧ್ಯವಿಲ್ಲ: ಆರಂಭದಲ್ಲೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ತಮಿಳುನಾಡು ಕೈಗೊಂಡಿರುವ ನಿರ್ಣಯವನ್ನು ಸಂವಿಧಾನಾತ್ಮಕವಾಗಿ ಒಪ್ಪುವಂತಹದ್ದಲ್ಲ. ನಮಗೆ ಲಭ್ಯವಿರುವ ನೀರಿನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ಅನುಷ್ಠಾನ ಮಾಡುತ್ತೇವೆ. ತಮಿಳುನಾಡು ಪ್ರಚೋದನೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ' ಎಂದು ತಿಳಿಸಿದರು.

ಕೇಂದ್ರ ಅನುಮತಿ ಕೊಡಬೇಕು: ‘ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಕೂಡಲೇ ಅನುಮತಿ ಕೊಡಬೇಕು ಮತ್ತು ವಿಸ್ತೃತ ಯೋಜನಾ ವರದಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಂಗೀಕರಿಸಬೇಕು. ಅಲ್ಲದೆ, ತಮಿಳುನಾಡಿನ ನಿರ್ಣಯವನ್ನು ಖಂಡಿಸಿ ನಾವು ಖಂಡನಾ ನಿರ್ಣಯ ಮಾಡಿ, ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

‘ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಿ ಮತ್ತು ಕೇಂದ್ರ ಜಲ ಸಂಪನ್ಮೂಲ ಸಚಿವರ ಮುಂದೆ ವಸ್ತುಸ್ಥಿತಿಯನ್ನು ಹೇಳಬೇಕು, ಅವರಿಗೂ ಇದು ತಿಳಿದಿರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಧರ್ಮಪಾಲನೆ ಮಾಡುವುದು ಕೇಂದ್ರ ಸರಕಾರದ ಕರ್ತವ್ಯ. ರಾಜ್ಯ ಅಭಿವೃದ್ಧಿ ಆದರೆ ಮಾತ್ರ ದೇಶ ಅಭಿವೃದ್ಧಿ ಆಗಲು ಸಾಧ್ಯ. ಕೇಂದ್ರ ಸರಕಾರ ಎಲ್ಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು' ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

‘ನಿನ್ನೆ ತಮಿಳುನಾಡಿನ ವಿಧಾನಸಭೆಯಲ್ಲಿ ಅಲ್ಲಿನ ಸರಕಾರ ಮತ್ತು ಇತರೆ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ಒಂದು ಕಾನೂನು ಬಾಹಿರ ನಿರ್ಣಯ ಮಾಡಿದೆ. ಇಂತಹ ನಿರ್ಣಯ ಮಾಡಲು ತಮಿಳುನಾಡು ವಿಧಾನಸಭೆಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ರಾಜಕೀಯವಾಗಿ ಕ್ಯಾತೆ ತೆಗೆಯಲು ಈ ನಿರ್ಣಯ ಮಾಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ' ಎಂದು ಸಿದ್ದರಾಮಯ್ಯ ತಿಳಿಸಿದರು.

ಅವರ ನಿರ್ಣಯಕ್ಕೆ ಕಿಮ್ಮತ್ತಿಲ್ಲ: ‘ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕಾರ ಮಾಡಿರುವ ನಿರ್ಣಯಕ್ಕೆ ಯಾವುದೇ ಕಿಮ್ಮತ್ತು ಇಲ್ಲ. ರಾಜ್ಯ ಸರಕಾರ ಮೊದಲಿಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವರ ಮನವೊಲಿಕೆ ಮಾಡುವ ಮೂಲಕ ಅಣೆಕಟ್ಟು ನಿರ್ಮಾಣ ಯೋಜನೆಗೆ ಅನುಮತಿ ಪಡೆದುಕೊಳ್ಳಬೇಕು' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.

‘ತಾಂತ್ರಿಕ ಮತ್ತು ಕಾನೂನಾತ್ಮಕವಾಗಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುವ ನ್ಯಾಯಬದ್ಧ ಹಕ್ಕು ರಾಜ್ಯ ಹೊಂದಿದೆ. 2007ರಲ್ಲಿ ಟ್ರಿಬ್ಯುನಲ್ ತೀರ್ಪು ಬಂದ ಬಳಿಕ ಸುಪ್ರೀಂ ಕೋರ್ಟ್ ಮುಂದೆ ಹೋಗಿದ್ದೆವು. ಬೆಂಗಳೂರು ನಗರಕ್ಕೆ ನೀರು ಹಂಚಿಕೆ ಬಗ್ಗೆ ಬೇಡಿಕೆ ಇಟ್ಟು ಮನವಿ ಮಾಡಿದ್ದೆವು. ಆಮೇಲೆ ಕೋರ್ಟ್ ನೀರು ಹಂಚಿಕೆ ಮಾಡಿತು, ಇದಕ್ಕೆ ತಮಿಳುನಾಡು ತಕರಾರಿಲ್ಲ ಎಂದು ಹೇಳಿದೆ' ಎಂದು ಹೇಳಿದರು. 

‘ರಾಜ್ಯಕ್ಕೆ ಬೇಕಿರುವುದು ಕೇಂದ್ರ ಪರಿಸರ ಇಲಾಖೆ ಅನುಮೋದÀನೆಯೇ ಹೊರತು ತಮಿಳುನಾಡಿನ ಒಪ್ಪಿಗೆ ಅಲ್ಲ. ಬೆಂಗಳೂರು ನಗರಕ್ಕೆ ಸುಪ್ರೀಂ ಕೋರ್ಟ್ ಹಂಚಿಕೆ ಮಾಡಿರುವ 4.5 ಟಿಎಂಸಿ ಸಾಮಥ್ರ್ಯದ ಅಣೆಕಟ್ಟು ಬಗ್ಗೆ ತಕರಾರು ತೆಗೆದಿಲ್ಲ. ಆದರೆ, ಕುಡಿಯುವ ನೀರು ಶೇಕರಣೆಗೆ 67 ಟಿಎಂಸಿ ಸಾಮಥ್ರ್ಯದ ಅಣೆಕಟ್ಟು ಏಕೆ ಎಂದು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ಬೆಂಗಳೂರು ನೀರಿನ ಬಳಕೆಗೆ ಬೇಕಿರುವ ಅಣೆಕಟ್ಟು ಕಟ್ಟಲು ತಮಿಳುನಾಡು ವಿರೋಧ ಇಲ್ಲವೆಂದು ಭಾವಿಸುತ್ತೇನೆ' ಎಂದು ಕುಮಾರಸ್ವಾಮಿ ತಿಳಿಸಿದರು.


‘ನಮ್ಮ ಪಾಲಿನ ಹೆಚ್ಚುವರಿ ನೀರನ್ನು ನಾವು ಬಳಕೆ ಮಾಡಿಕೊಳ್ಳಲು ತಮಿಳುನಾಡಿನ ಸರಕಾರ ತಕರಾರು ಮಾಡುತ್ತಿದೆ. ಅಲ್ಲಿನ ಎಲ್ಲ ಪಕ್ಷಗಳು ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿವೆ. ನಾವು ನಮ್ಮ ನೆಲ, ಜಲ, ಭಾμÉ, ಗಡಿಗೆ ಸಂಬಂಧಿಸಿದಂತೆ ರಾಜಕಾರಣ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಮೊನ್ನೆ ಸಿಎಂ ಸರ್ವಪಕ್ಷಗಳ ಸಭೆ ಕರೆದಿದ್ದರು, ಅಲ್ಲಿ ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದ್ದೇವೆ. ನಮಗೆ ರಾಜಕೀಯಕ್ಕಿಂತ ನಾಡಿನ ಜನರ ಹಿತ ಮುಖ್ಯ' 

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ


‘ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರಕಾರ ಕೈಗೊಂಡಿರುವ ನಿರ್ಣಯಕ್ಕೆ ಅಂಜುವ ಪ್ರಶ್ನೆ ಇಲ್ಲ. ನೀರಾವರಿ ವಿಚಾರದ ಬಗ್ಗೆ ಸರ್ವಪಕ್ಷ ಸಭೆ ನಡೆಸಲಾಗಿದೆ. ತಮಿಳುನಾಡು ಅಡ್ಡಗಾಲು ಹಾಕುವ ಪ್ರಯತ್ನದಿಂದ ನಮ್ಮ ಹಕ್ಕಿಗೆ ಚ್ಯುತಿ ಮಾಡಿದೆ. ನಮ್ಮ ನಿಲುವನ್ನು ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಕೇಂದ್ರ ಜಲಶಕ್ತಿ ಮನವರಿಕೆ ಮಾಡಿಕೊಡಬೇಕು. ತಮಿಳುನಾಡು ನಿರ್ಣಯವನ್ನು ನಾವಾಗಲಿ, ಕೇಂದ್ರ ಆಗಲಿ ಅದನ್ನು ಒಪ್ಪುವ ಪ್ರಶ್ನೆ ಇಲ್ಲ.ನಾನು ಇದನ್ನು ಖಂಡಿಸ್ತೇನೆ. ಸಿಎಂ ಆದಷ್ಟು ಬೇಗ ದಿಲ್ಲಿಗೆ ಹೋಗಿ ಪರಿಸರ ಇಲಾಖೆಯ ಅನುಮತಿ ತೆಗೆದುಕೊಂಡು ಬರಬೇಕು'

-ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News