ಪಶ್ಚಿಮವಾಹಿನಿ ಯೋಜನೆ ಕುರಿತು ಮಾಸ್ಟರ್ ಪ್ಲ್ಯಾನ್: ಸಚಿವ ಜೆ.ಸಿ.ಮಾಧುಸ್ವಾಮಿ
ಬೆಂಗಳೂರು, ಮಾ. 22: ‘ಸಮುದ್ರಕ್ಕೆ ಸೇರುವ ನೀರನ್ನು ತಡೆದು ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಉಪಯೋಗಿಸಲು “ಪಶ್ಚಿಮವಾಹಿನಿ ಯೋಜನೆ ಕುರಿತು ಮಾಸ್ಟರ್ ಪ್ಲಾನ್ ಯೋಜನೆ ತಯಾರಿಸಲಾಗಿದೆ' ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭಾ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಎಚ್.ಕೆ.ಕುಮಾರಸ್ವಾಮಿ ಕೇಳಿದÀ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಯೋಜನೆಯನ್ನು 3,986 ಕೋಟಿ ರೂ.ಅಂದಾಜು ವೆಚ್ಚದಲ್ಲಿ ಮುಂದಿನ ಐದು ವರ್ಷಗಳಲ್ಲಿ 1,348 ಕಿಂಡಿ ಅಣೆಕಟ್ಟುಗಳನ್ನು ಹಂತ-ಹಂತವಾಗಿ ಜಾರಿಗೊಳಿಸಲಾಗುವುದು' ಎಂದು ತಿಳಿಸಿದರು.
‘2021-22ನೆ ಸಾಲಿನಲ್ಲಿ ಮೊದಲನೇ ಹಂತದಲ್ಲಿ 500 ಕೋಟಿ ರೂ.ಒದಗಿಸಲಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಉತ್ತರಕನ್ನಡ ಜಿಲ್ಲೆಗಳು ಈ ಯೋಜನೆಯಡಿ ಸೇರಿರುತ್ತವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಭಾಗಶಃ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಪ್ರದೇಶದಲ್ಲಿ ಬರುತ್ತಿದ್ದು, ಪ್ರಮುಖವಾಗಿ ಪಶ್ಚಿಮಘಟ್ಟದ ದಟ್ಟ ಅರಣ್ಯ ಪ್ರದೇಶಗಳು ಈ ಭಾಗದಲ್ಲಿ ಒಳಗೊಂಡಿದೆ.
ತೀವ್ರ ಇಳಿಜಾರಿನಿಂದ ಕೂಡಿರುವುದರಿಂದ ಈ ಸ್ಥಳಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಕೈಗೊಳ್ಳಲು ತಾಂತ್ರಿಕವಾಗಿ ಕಾರ್ಯಸಾಧುವಾಗಿರುವ ಸ್ಥಳ ಗುರುತಿಸಲು ವಿವರವಾದ ಅಧ್ಯಯನ ನಡೆಸಬೇಕಾಗಿರುತ್ತದೆ ಹಾಗೂ ದಟ್ಟ ಅರಣ್ಯ ಪ್ರದೇಶವಾಗಿರುವುದರಿಂದ ನೀರಾವರಿ ಸೌಲಭ್ಯ ಕಲ್ಪಿಸಲು ಕೃಷಿ ಭೂಮಿ ಲಭ್ಯವಿರುವ ಬಗ್ಗೆ ಪರಿಶೀಲಿಸಬೇಕಾಗಿರುವುದರಿಂದ ಈ ಯೋಜನೆಗೆ ಸಕಲೇಶಪುರ ತಾಲ್ಲೂಕು ಸೇರಿರುವುದಿಲ್ಲ. ಸಕಲೇಶಪುರ ತಾಲೂಕಿನಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಸೂಕ್ತ ಸ್ಥಳಗಳನ್ನು ಗುರುತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.