ಶಿಕ್ಷಣ ಇಲಾಖೆಯ ನೇಮಕಾತಿಯಲ್ಲಿ ಕನ್ನಡ ಅಧ್ಯಾಪಕರಿಗೆ ನ್ಯಾಯ ಕಲ್ಪಿಸಿ: ಸರಕಾರಕ್ಕೆ ಬರಗೂರು ರಾಮಚಂದ್ರಪ್ಪ ಪತ್ರ
ಬೆಂಗಳೂರು, ಮಾ.22: ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು 6ರಿಂದ 8ನೇ ತರಗತಿಯ ಬೋಧನೆಗಾಗಿ 15,000 ಅಧ್ಯಾಪಕರ ಹುದ್ದೆಗಳ ನೇಮಕಾತಿ ಪ್ರಕಟನೆ ಹೊರಡಿಸಿದ್ದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಆದರೆ, ಕನ್ನಡ ಅಧ್ಯಾಪಕರಿಗೆ ಅವಕಾಶ ಕಲ್ಪಿಸದೆ ಇರುವುದನ್ನು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಖಂಡಿಸಿದ್ದಾರೆ.
ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವರಿಗೆ ಪತ್ರವನ್ನು ಬರೆದಿರುವ ಅವರು, ಆಂಗ್ಲಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇಲ್ಲಿ ಕನ್ನಡ ವಿಷಯವನ್ನು ಸೇರಿಸಿಲ್ಲ. ಹಿಂದೆಯೂ ಹೀಗೇ ಆಗಿತ್ತೆಂದೂ ಸಮಾಜ ವಿಜ್ಞಾನದ ಅಧ್ಯಾಪಕರಿಗೆ ಕನ್ನಡ ಬೋಧನೆ ಮಾಡಲು ಹೇಳಲಾಗಿತ್ತೆಂದೂ ತಿಳಿದುಬಂದಿದ್ದು, ಇದು ನಿಜವಾಗಿದ್ದರೆ ಅನುಚಿತ ಮತ್ತು ಅನ್ಯಾಯವಾಗಿರುತ್ತದೆ ಎಂದು ಉಲ್ಲೇಖಿಸಿದ್ದಾರೆ.
ಆಂಗ್ಲಭಾಷೆ ಬೋಧನೆಗೆ ಪದವಿ ವ್ಯಾಸಂಗದಲ್ಲಿ ಐಚ್ಛಿಕ ವಿಷಯವಾಗಿ ಆಂಗ್ಲಭಾಷೆ ಮತ್ತು ಸಾಹಿತ್ಯದ ಅಧ್ಯಯನ ಮಾಡಿದವರು ಮಾತ್ರ ಅರ್ಜಿ ಹಾಕಬಹುದೆಂದು ಹೇಳಲಾಗಿದೆ. ಇದೇ ರೀತಿ ಕನ್ನಡ ಬೋಧನೆಗೆ ಪದವಿ ವ್ಯಾಸಂಗದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿದವರು ಮಾತ್ರವೇ ಅರ್ಹರೆಂದು ಪರಿಗಣಿಸಿ ಅರ್ಜಿ ಆಹ್ವಾನಿಸಬೇಕಿತ್ತು. ಆದರೆ ಪ್ರಕಟನೆಯಲ್ಲಿ ಕನ್ನಡ ಅಧ್ಯಾಪಕರ ಹುದ್ದೆಯ ಪ್ರಾಸ್ತಾಪವೇ ಇಲ್ಲ. ಹಾಗಾದರೆ ಕನ್ನಡ ಬೋಧನೆಯ ಅಗತ್ಯವಿಲ್ಲವೇ? ಬೋಧನೆ ಅಗತ್ಯವಿದ್ದರೂ ಕನ್ನಡ ಪದವೀಧರರ ಅಗತ್ಯವಿಲ್ಲ ಎಂದು ತಿಳಿಯಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.
ಸರಕಾರ ಹಾಗೂ ಶಿಕ್ಷಣ ಇಲಾಖೆಯು ಕೂಡಲೇ ಕನ್ನಡಕ್ಕೆ ಆಗುವ ಈ ಅನ್ಯಾಯವನ್ನು ಸರಿಪಡಿಸಬೇಕು. ಕನ್ನಡ ಅಧ್ಯಾಪಕ ಹುದ್ದೆಗಳಿಗೆ ಪ್ರತ್ಯೇಕವಾಗಿ ಅರ್ಜಿಗಳನ್ನು ಆಹ್ವಾನಿಸಬೇಕು. ಕನ್ನಡ ವಿಷಯವನ್ನು ಕನ್ನಡ ಐಚ್ಚಿಕ ಪದವೀಧರರಾದ ಅರ್ಹ ಅಭ್ಯರ್ಥಿಗಳೇ ಬೋಧಿಸುವಂತಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.