ಒಂದೂವರೆ ತಿಂಗಳಲ್ಲಿ ಶ್ರೀರಂಗಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಿ: ಸಚಿವ ಆನಂದ್ ಸಿಂಗ್ ಸೂಚನೆ
ಬೆಂಗಳೂರು, ಮಾ.22: ಒಂದೂವರೆ ತಿಂಗಳಲ್ಲಿ ಶ್ರೀರಂಗಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಳ್ಳಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಸಚಿವರು, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರೊಂದಿಗೆ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದರು.
ಶ್ರೀರಂಗಪಟ್ಟಣದ ಕೋಟೆಯ ಪ್ರವೇಶ ದ್ವಾರ, ಸ್ನಾನಘಟ್ಟ ಹಾಗೂ ಪಶ್ಚಿಮ ವಾಹಿನಿಯ ಮೂರು ಕಾಮಗಾರಿಯನ್ನು ಮೊದಲ ಆದ್ಯತೆಯಾಗಿ ಕೈಗೆತ್ತಿಕೊಳ್ಳಬೇಕು. ಒಂದೂವರೆ ತಿಂಗಳಲ್ಲಿ ಯೋಜನೆಯ ರೂಪುರೇಷೆ ಸಿದ್ಧಪಡಿಸಿ, ಕಾಮಗಾರಿ ಕೈಗೊಳ್ಳಬೇಕು. ಈಗಿರುವ ಸ್ನಾನಘಟ್ಟದ ಉದ್ದ ಕಿರಿದಾಗಿದೆ. ಅದನ್ನು ಇನ್ನಷ್ಟು ದೊಡ್ಡದು ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಾಗಲಿದೆ. ಈ ಮೂಲಕ ಸ್ನಾನಘಟ್ಟಕ್ಕೆ ಹೊಸರೂಪ ನೀಡಬೇಕು.
ಯಾವುದೇ ಕಾರಣಕ್ಕೂ ಕಾಮಗಾರಿ ತಡ ಮಾಡುವಂತಿಲ್ಲ. ಕಾಮಗಾರಿಗೆ ಅಗತ್ಯಕ್ಕಿಂತ ಹೆಚ್ಚಿನ ಅನುದಾನ ಬೇಕಾದರೆ ಬಿಡುಗಡೆ ಮಾಡಲಾಗುವುದು. ಕೆಲಸದ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ ಎಂದು ಅಧಿಕಾರಿಗಳಿಗೆ ಸಚಿವರು ಹೇಳಿದರು.
ಕೆಲವು ಶಾಸಕರ ಕ್ಷೇತ್ರದಲ್ಲಿ ಸ್ಮಾರಕಗಳಿದ್ದು, ಇದರ ನಿರ್ವಹಣೆ ಹಾಗೂ ಅಭಿವೃದ್ಧಿ ಸಮಸ್ಯೆ ಏನು ಎಂಬುದು ಅಲ್ಲಿನ ಶಾಸಕರಿಗೆ ತಿಳಿದಿದೆ. ಯಾವುದೇ ಸಮಸ್ಯೆಯಾಗದಂತೆ ಸ್ಮಾರಕ ಸಂರಕ್ಷಣೆ ಮಾಡುವ ಜತೆಗೆ ಅಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಇಟಲಿಯ ವೆನಿಸ್ ಮಾದರಿಯಲ್ಲಿ ಕೋಟೆ ಬಳಿ ದೋಣಿ ವಿಹಾರ ನಿರ್ಮಿಸಬೇಕು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು, ಸಚಿವರ ಬಳಿ ಮನವಿ ಮಾಡಿದ್ದರು. ಹಂತ-ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.
ಕಳೆದ ವಾರ ಸದನದಲ್ಲಿ ಶ್ರೀರಂಗಪಟ್ಟಣದ ಅಭಿವೃದ್ಧಿ ಬಗ್ಗೆ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ ಎತ್ತಿದ್ದರು. ಈ ಹಿಂದಿನ ಸರಕಾರದದಲ್ಲಿ ದೋಣಿ ವಿಹಾರ ಇನ್ನಿತರ ಕಾಮಗಾರಿಗಳಿಗೆ ಹಣ ಮಂಜೂರಾಗಿತ್ತು. ಆದರೆ ಇದೀಗ ಬೇರೆ ಕಾಮಗಾರಿಗಳನ್ನು ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಯಿಂದ ಮಾರ್ಪಾಡು ಮಾಡಲಾಗಿದ್ದು, ಈ ವಿಚಾರ ಸ್ಥಳೀಯ ಶಾಸಕನಾದ ನನ್ನ ಗಮನಕ್ಕೆ ಬಂದಿಲ್ಲ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್ ಅವರು ಶಾಸಕರ ಸಲಹೆ ಪಡೆದು ಮುನ್ನಡೆಯಲಾಗುದು. ರವಿವಾರವಷ್ಟೇ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದ ಸಚಿವರು, ಇದೀಗ ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದ್ದಾರೆ.
ಈ ವೇಳೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್‍ಕುಮಾರ್ ಪಾಂಡೆ, ಇಲಾಖೆ ನಿರ್ದೇಶಕ ವೆಂಕಟೇಶ್, ಪುರಾತತ್ವ ಇಲಾಖೆ ಆಯುಕ್ತೆ ಪೂರ್ಣಿಮಾ ಹಾಗೂ ಇನ್ನಿತರರ ಅಧಿಕಾರಿಗಳು ಹಾಜರಿದ್ದರು.