ದಾನಿಶ್ ಸಿದ್ದೀಕಿ ಹತ್ಯೆ ಪ್ರಕರಣ: ತಾಲಿಬಾನ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಹೆತ್ತವರು

Update: 2022-03-22 17:50 GMT

ಹೊಸದಿಲ್ಲಿ, ಮಾ. 22: ಕಳೆದ ವರ್ಷ ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ದಾಳಿ ಸಂದರ್ಭ ಮೃತಪಟ್ಟ ರಾಯ್ಟರ್ ನ ಛಾಯಾಚಿತ್ರಗ್ರಾಹಕ ದಾನಿಶ್ ಸಿದ್ದೀಕಿ ಅವರ ಹೆತ್ತವರು ತಾಲಿಬಾನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ದಲ್ಲಿ ಕಾನೂನು ಹೋರಾಟ ಆರಂಭಿಸಿದ್ದಾರೆ ಎಂದು ಅವರ ವಕೀಲರು ಮಂಗಳವಾರ ತಿಳಿಸಿದ್ದಾರೆ.

ಅಪ್ಘಾನಿಸ್ತಾನ ಹಾಗೂ ಪಾಕಿಸ್ತಾನ ಗಡಿಯ ಸಮೀಪದ ಪಟ್ಟಣ ಸ್ಪಿನ್ ಬೋಲ್ಡಾಕ್ ಅನ್ನು ತಾಲಿಬಾನ್ ನಿಂದ ಮರು ಸ್ವಾಧೀನಪಡಿಸಿಕೊಳ್ಳುವ ಸರಕಾರದ ಪಡೆಗಳ ಪ್ರಯತ್ನ ವಿಫಲವಾದ ಸಂದರ್ಭ ಅಫ್ಘಾನಿಸ್ತಾನದ ವಿಶೇಷ ಪಡೆಯೊಂದಿಗೆ ಇದ್ದ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಸಿದ್ದೀಕಿ ಅವರು ಜುಲೈ 16ರಂದು ಹತ್ಯೆಗೀಡಾಗಿದ್ದರು. ಛಾಯಾಚಿತ್ರ ಪತ್ರಕರ್ತ ಹಾಗೂ ಭಾರತದ ಪ್ರಜೆಯಾಗಿರುವುದರಿಂದ ತಾಲಿಬಾನ್ ತನ್ನ ಪುತ್ರನ್ನು ಗುರಿಯಾಗಿರಿಸಿ ಹತ್ಯೆಗೈದಿದೆ ಎಂಬ ನೆಲೆಯಲ್ಲಿ 6 ನಾಯಕರು ಹಾಗೂ ತಾಲಿಬಾನ್ನ ಇತರ ಅನಾಮಿಕ ಕಮಾಂಡರ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಅವರು ಹೇಗ್ ಮೂಲದ ಐಸಿಸಿಯ ಮೆಟ್ಟಿಲೇರಿದ್ದಾರೆ ಎಂದು ಆನ್ ಲೈನ್ ಸುದ್ದಿ ಸಮಾವೇಶದಲ್ಲಿ ಹೊಸದಿಲ್ಲಿ ಮೂಲದ ನ್ಯಾಯವಾದಿ ಅವಿ ಸಿಂಗ್ ತಿಳಿಸಿದ್ದಾರೆ.

ಸಿದ್ದೀಖಿ ಅವರು ಹೊಸದಿಲ್ಲಿ ಮೂಲದವರು. ಅಮೆರಿಕ ಹಾಗೂ ಅದರ ಮೈತ್ರಿಕೂಟ ಅಲ್ಲಿ ತನ್ನ 20 ವರ್ಷಗಳ ದೀರ್ಘಕಾಲದ ಯುದ್ಧವನ್ನು ಅಂತ್ಯಗೊಳಿಸಲು ತಮ್ಮ ಪಡೆಯನ್ನು ಹಿಂಪಡೆಯುತ್ತಿದ್ದಂತೆ ದೇಶವನ್ನು ಮರು ಪಡೆಯುವ ತಾಲಿಬಾನ್ ಅಭಿಯಾನದ ಬಗ್ಗೆ ವರದಿ ಮಾಡಲು ಅಪ್ಘಾನಿಸ್ತಾನದಲ್ಲಿ ಪ್ರವಾಸ ಮಾಡಿದ್ದರು. 38ರ ಹರೆಯದ ಸಿದ್ದೀಖಿ ಅವರನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಿತ್ತು ಹಾಗೂ ಹತ್ಯೆಗೈದಿತ್ತು. ಅವರ ಮೃತದೇಹವನ್ನು ಛಿದ್ರಗೊಳಿಸಿತ್ತು ಎಂದು ಸಿಂಗ್ ಹಾಗೂ ಅವರ ಕುಟುಂಬ ನ್ಯೂಸ್ ಕಾನ್ಫರೆನ್ಸ್ ಮುಂದೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ. ಈ ಕೃತ್ಯ ಕೇವಲ ಕೊಲೆಯಲ್ಲ. ಮಾನವೀಯತೆ ವಿರುದ್ಧದ ಅಪರಾಧ ಹಾಗೂ ಯುದ್ಧಾಪರಾಧ ಎಂದು ಅವರು ಹೇಳಿದ್ದಾರೆ. ತಾಲಿಬಾನ್ನೊಂದಿಗೆ ಭೀಕರ ಹೋರಾಟದ ನಡುವೆ ಸ್ಪಿನ್ ಬೋಲ್ಡಾಕ್ನಿಂದ ಯೋಧರು ಹಿಂದೆ ಸರಿದಾಗ ಇಬ್ಬರು ಕಮಾಂಡೊಗಳೊಂದಿಗೆ ದಾನಿಶ್ ಅವರು ಉಳಿದುಕೊಂಡಿದ್ದರು ಎಂದು ಸಿದ್ದೀಕ್ ಅವರಿಗೆ ಆತಿಥ್ಯ ನೀಡಿದ್ದ ಅಫ್ಘಾನಿಸ್ಥಾನದ ಈ ಹಿಂದಿನ ವಿಶೇಷ ಕಾರ್ಯಾಚರಣೆ ಕಾರ್ಪ್ಸ್ನ ಕಮಾಂಡರ್ ತಿಳಿಸಿದ್ದಾರೆ. ತಾವು ಸಿದ್ದೀಕಿಯನ್ನು ಸೆರೆ ಹಿಡಿದಿದ್ದೇವೆ ಹಾಗೂ ಹತ್ಯೆಗೈದಿದ್ದೇವೆ ಎಂಬ ಆರೋಪವನ್ನು ತಾಲಿಬಾನ್ ನಿರಾಕರಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News