ಮುಸ್ಲಿಮ್‍ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ವ್ಯಂಗ್ಯ ಮಾಡಿದ ಹಿರೇಮಗಳೂರು ಕಣ್ಣನ್ ವಿರುದ್ಧ ವ್ಯಾಪಕ ಟೀಕೆ

Update: 2022-03-23 08:31 GMT

ಮೈಸೂರು, ಮಾ.23: ಮೈಸೂರಿನ ರಂಗಾಯಣದಲ್ಲಿ ಇತ್ತೀಚೆಗೆ ನಡೆದ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಚಿಕ್ಕಮಗಳೂರಿನ ಪೂಜಾರಿ ಹಿರೇಮಗಳೂರು ಕಣ್ಣನ್, ಹಿಜಾಬ್ ನಿಷೇಧ ಕುರಿತ ಹೇಳಿಕೆ ನೀಡುವ ವೇಳೆ ಮುಸ್ಲಿಮ್ ಮಹಿಳೆಯರ ಬಗ್ಗೆ ಆಡಿದ್ದ ಕೀಳುಮಟ್ಟದ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಲೇಖಕರು, ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಂಗಾಯಣದಲ್ಲಿ ನಡೆದ ತಾಯಿ ಪರಿಕಲ್ಪನೆಯ ಕಾರ್ಯಕ್ರಮದಲ್ಲಿ ಕಣ್ಣನ್ ಮಾತನಾಡುವ ವೇಳೆ "ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಶಾಲಾ- ಕಾಲೇಜುಗಳಿಂದ ಹಿಜಾಬ್ ಹೊರಟು ಹೋಗಿದೆ. ಇನ್ನುಮಯಂದೆ ಶಾಲೆಗೆ ಹೇಗೆ ಬರಬೇಕು ಹೇಳಬೇಕು?  ಮುಖ ಮುಚ್ಕೊಂಡು ಬರಬೇಡ, ಮುಚ್ಕೊಂಡು ಬಾ. ಏನು ಭಯ ರೀ ಮಾತಾಡೋಕೆ? ಡಾಕ್ಟ್ರ ಹತ್ತಿರ ಹೋದ್ರೆ ಎಲ್ಲಾ ಬಿಚ್ಚಿ ತೋರಿಸ್ತೀರಿ. ಮಾತಾಡೋಕೆ ಯಾಕೆ ಹೆದರಬೇಕು?" ಎಂದು ಹೇಳಿದ್ದರು.

ಈ ವಿಚಾರಕ್ಕೆ ಫೇಸ್ ಬುಕ್, ವಾಟ್ಸ್ ಆ್ಯಪ್ ಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, "ತುಚ್ಚವಾಗಿ ಮಾತನಾಡುವ ಈ ನೀಚ ತಾನು ಪೂಜೆ ಮಾಡುವ ಕೋದಂಡರಾಮ ದೇವಾಲಯದಲ್ಲಿ ರಾಮನ ಜೊತೆ ನಿಂತಿರುವ ಸೀತೆಯನ್ನು ಯಾವ ದೃಷ್ಟಿಯಿಂದ ನೋಡುತ್ತಿರಬಹುದು?" ಎಂದು ಶಶಿಧರ ಹೆಮ್ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮರ್ಶಕ ರಹಮತ್ ತರೀಕೆರೆ ಪ್ರತಿಕ್ರಿಯಿಸಿ, "ಕಣ್ಣನ್ ಅವರು ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬರುವ ಹೆಣ್ಣುಮಕ್ಕಳ ಬಗ್ಗೆ ತುಚ್ಛವಾದ ಶಬ್ದ ಬಳಸಿದ ಬಗ್ಗೆ ಓದಿದೆ‌. ಅವರಿಗೂ ಹೆಣ್ಣು ಮಕ್ಕಳು ಇರಬೇಕು, ಪ್ರಶ್ನೆಯೆಂದರೆ, ಎಲ್ಲಿಂದ  ಹುಟ್ಟುತ್ತಿದೆ ಈ ಅಮಾನುಷ ಕಿಲುಬು ಕ್ಷುದ್ರತೆ? ಕಲೆ ನುಡಿಯನ್ನು ಸಂವೇದನಾಶೀಲಗೊಳಿಸಬೇಕು, ಬದಲಿಗೆ ಮಲಿನಗೊಳಿಸುತ್ತಿದೆ" ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ ಇದು ಸಭ್ಯತೆಯ ಪ್ರಶ್ನೆ, ರಂಗ-ಧರ್ಮದ ಪ್ರಶ್ನೆ. ಶ್ರೀಯುತರು ಬಾಯಿತಪ್ಪಿ ಮರ್ಯಾದ ಮೀರಿ ಮಾತನಾಡಿದ್ದಾರೆ. ಅವರನ್ನು ನಾವು ಕ್ಷಮಿಸಿಬಿಡೋಣ. ಆದರೆ ನಾನು ರಂಗಭೂಮಿ ಮರ್ಯಾದೆ ಉಳಿಸಲು ಮಾ.27ರಿಂದ ನಗರದಲ್ಲಿ ಅನಿರ್ದಿಷ್ಟಾವಧಿಯ ಉಪವಾಸ ನಡೆಸುವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News