ಯಾದಗಿರಿ: ಸರಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಅವಕಾಶ
Update: 2022-03-23 15:40 IST
ಯಾದಗಿರಿ, ಮಾ.23: ಕೆಂಭಾವಿ ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರೂ ಕೆಲವರ ವಿರೋಧದ ಹಿನ್ನೆಲೆಯಲ್ಲಿ ಬಳಿಕ ಅರ್ಧದಲ್ಲೇ ಪ್ರಶ್ನೆಪತ್ರಿಕೆ ವಾಪಸ್ ಪಡೆದ ಘಟನೆ ಮಂಗಳವಾರ ನಡೆದಿರುವುದು ವರದಿಯಾಗಿದೆ.
ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಪದವಿ ಮೊದಲನೇ ಸೆಮಿಸ್ಟರ್ ಪ್ರಾಯೋಗಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಆಗಮಿಸಿದ ಸುಮಾರು ಐದು ವಿದ್ಯಾರ್ಥಿನಿಯರಿಗೆ ಮಂಗಳವಾರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಇದನ್ನು ವಿರೋಧಿಸಿ ಕಾಲೇಜಿನಲ್ಲಿ ಕೆಲವರು ಗದ್ದಲ ಎಬ್ಬಿಸಿದ್ದಾರೆ. ಇದರಿಂದ ಒತ್ತಡಕ್ಕೊಳಗಾದ ಪರೀಕ್ಷಾ ಮೇಲ್ವಿಚಾರಕರು ಪರೀಕ್ಷೆ ಆರಂಭಗೊಂಡ ಸುಮಾರು ಒಂದು ಗಂಟೆಯ ಬಳಿಕ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಂದ ಪ್ರಶ್ನೆಪತ್ರಿಕೆಯನ್ನು ಹಿಂಪಡೆದರು.
ಇದರಿಂದ ಉತ್ಸಾಹದಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯರು ನಿರಾಶೆಗೊಳಗಾದರು.