ನನ್ನ ಕ್ಷೇತ್ರ ಕರ್ನಾಟಕದಲ್ಲಿ ಇದೆಯೋ, ಇಲ್ಲವೋ?: ಬಿಜೆಪಿ ಶಾಸಕ ಅಭಯ್ ಪಾಟೀಲ್
ಬೆಂಗಳೂರು, ಮಾ. 23: ‘ಬೆಳಗಾವಿ ದಕ್ಷಿಣ ಕ್ಷೇತ್ರ ಕರ್ನಾಟಕ ರಾಜ್ಯದಲ್ಲಿ ಇದೆಯೋ ಅಥವಾ ಇಲ್ಲವೋ? ನಾಲ್ಕು ವರ್ಷಗಳಿಂದ ನನ್ನ ಕ್ಷೇತ್ರಕ್ಕೆ ಎಸ್ಸಿಪಿ-ಟಿಎಸ್ಪಿ ಯೋಜನೆಯಡಿ ರಸ್ತೆ ಮತ್ತು ಕಾಲನಿಗಳ ಅಭಿವೃದ್ಧಿಗೆ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ ಏಕೆ?' ಎಂದು ಆಡಳಿತ ಪಕ್ಷದ ಸದಸ್ಯ ಅಭಯ್ ಪಾಟೀಲ್ ಪ್ರಶ್ನಿಸುವ ಮೂಲಕ ಸರಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದ ಪ್ರಸಂಗ ನಡೆಯಿತು.
ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕೆಲ ಕ್ಷೇತ್ರಗಳಿಗೆ ನಾಲ್ಕೈದು ಕೋಟಿ ರೂ.ಗಳನ್ನು ನೀಡಲಾಗಿದೆ, ಸಂತೋಷ. ನನ್ನ ಕ್ಷೇತ್ರ ಮೀಸಲು ಕ್ಷೇತ್ರವೇನಲ್ಲ. ಆದರೆ, ಸಾಮಾನ್ಯ ಕ್ಷೇತ್ರದಲ್ಲಿ ಎಸ್ಸಿ-ಎಸ್ಟಿ ವರ್ಗದ ಜನರು ಇಲ್ಲವೇ? ಹೀಗಾಗಲೇ ಬೇರೆ ರಾಜ್ಯಕ್ಕೆ ಹೋಗುವ ಕೂಗು ಎದ್ದಿದ್ದು ಸರಕಾರ ಅದಕ್ಕೆ ಅವಕಾಶ ಮಾಡಿಕೊಡಬಾರದು' ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಶಾಸಕರ ಕ್ಷೇತ್ರಕ್ಕೆ ಹಂಚಿಕೆ: ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಯಾವ ಕಾರಣಕ್ಕಾಗಿ ಅನ್ಯಾಯ ಮಾಡಲಾಗಿದೆ ಎಂಬುದು ಗೊತ್ತಿಲ್ಲ, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಈ ಬಾರಿ ಎಸ್ಸಿಪಿ-ಟಿಎಸ್ಪಿ ಅಡಿಯಲ್ಲಿ ಬಜೆಟ್ ಅನುದಾನವನ್ನು ನೇರವಾಗಿ ಜಿಲ್ಲಾಧಿಕಾರಿಗಳ ಮೂಲಕ ಶಾಸಕರ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗುವುದು' ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದರು.
‘ಮೀಸಲು ಕ್ಷೇತ್ರಗಳು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳಿಗೆ ಪ್ರಗತಿ ಕಾಲನಿ ಯೋಜನೆಯಡಿ ರಸ್ತೆ ಮತ್ತು ಎಸ್ಸಿ-ಎಸ್ಟಿ ಕಾಲನಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ಮೇಲೆ ಕ್ರಮ ವಹಿಸಲಾಗುವುದು. ಶಾಸಕ ಅಭಯ್ ಪಾಟೀಲ್ ಅವರು ಆತಂಕಪಡುವುದು ಬೇಡ' ಎಂದು ಕೋಟ ಶ್ರೀನಿವಾಸ ಪೂಜಾರಿ ಆಭಯ ನೀಡಿದರು.
‘ನಮ್ಮ ಸರಕಾರ ಆರ್ಥಿಕವಾಗಿ ಸದೃಢವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಆದರೆ, ಅವರದೆ ಪಕ್ಷದ ಶಾಸಕ ಕ್ಷೇತ್ರದ ಅಭಿವೃದ್ಧಿಗೆ ಸರಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. 25 ಸಾವಿರ ಕೋಟಿ ರೂ.ಗಳಿಂದ 30 ಸಾವಿರ ಕೋಟಿ ರೂ.ಗಳಷ್ಟು ಬಿಲ್ ಬಾಕಿ ಇದೆ. ಇದನ್ನೆಲ್ಲ ನೀಡುವುದು ಎಂದು. ಸರಕಾರದ ಬಳಿ ಹಣವಿದೆಯೋ ಇಲ್ಲವೋ?'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ