ಸಾಗರ: ಮರಕ್ಕೆ ಕಾರು ಢಿಕ್ಕಿ; ಓರ್ವ ಮೃತ್ಯು
Update: 2022-03-23 19:38 IST
ಸಾಗರ,ಮಾ.23 : ತಾಲೂಕಿನ ಆನಂದಪುರ ಸಮೀಪದ ಚನ್ನಕೊಪ್ಪ ಗ್ರಾಮದಲ್ಲಿ ಮರಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆದು ವೃದ್ಧರೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಕಾರು ಎದುರು ಗಡೆಯಿಂದ ವಾಹನವೊಂದು ಬಂದಿರುವ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಕಾರು ರಸ್ತೆಯಿಂದ ಹತ್ತು ಅಡಿ ದೂರಕ್ಕೆ ಎಸೆಯಲ್ಪಟ್ಟಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವೃದ್ಧರೋರ್ವರು ಸಾವನ್ನಪ್ಪಿದ್ದು, ಮೃತದೇಹವನ್ನು ಸಾಗರದ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ಇನ್ನುಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಾಗಳಾಗಿದ್ದು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.