ಪಂಚಮಸಾಲಿ ಸಮುದಾಯದ ವರದಿ ಸಲ್ಲಿಕೆಗೆ ಸಮಿತಿ ರಚನೆ ಪ್ರಶ್ನಿಸಿ ಅರ್ಜಿ: ವಿಭಾಗೀಯ ಪೀಠಕ್ಕೆ ಶಿಫಾರಸು ಮಾಡಿದ ಹೈಕೋರ್ಟ್
ಬೆಂಗಳೂರು, ಮಾ.23: ವೀರಶೈವ-ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರ್ಪಡೆಗೊಳಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸಿ ವರದಿ ಸಲ್ಲಿಸಲು ನ್ಯಾ.ಸುಭಾಷ್ ಅಡಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿರುವ ಸರಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ, ವಿಭಾಗೀಯ ಪೀಠದ ವಿಚಾರಣೆಗೆ ಶಿಫಾರಸು ಮಾಡಿದೆ.
ಸರಕಾರದ ಆದೇಶ ರದ್ದುಕೋರಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಅರ್ಜಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿತು.
ಬಳಿಕ ಅರ್ಜಿಯನ್ನು ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸುವ ಸಂಬಂಧ ಸೂಕ್ತ ಆದೇಶ ಹೊರಡಿಸಲು ಅನುಕೂಲವಾಗುವಂತೆ ಅರ್ಜಿಗೆ ಕಡತವನ್ನು ಸಿಜೆಗೆ ಮುಂದಿರಿಸುವಂತೆ ರಿಜಿಸ್ಟ್ರಾರ್‍ಗೆ ನ್ಯಾಯಪೀಠ ನಿರ್ದೇಶಿಸಿತು. ಇದೇ ವೇಳೆ, ನ್ಯಾ.ಸುಭಾಷ್ ಅಡಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಕಾರ್ಯನಿರ್ವಹಣೆಗೆ ನಿರ್ಬಂಧ ಹೇರುವಂತೆ ಅರ್ಜಿದಾರರು ಮಾಡಿದ ಮನವಿ ಪುರಸ್ಕರಿಸಲು ನ್ಯಾಯಪೀಠ ನಿರಾಕರಿಸಿತು.