ಶೃಂಗೇರಿ: ಜಾತ್ರೆಯಲ್ಲಿ ಇತರ ಧರ್ಮೀಯರ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮನವಿ

Update: 2022-03-23 15:30 GMT

ಚಿಕ್ಕಮಗಳೂರು, ಮಾ.23: ಹಿಂದೂ ಧರ್ಮೀಯರ ಜಾತ್ರಾ ಮಹೋತ್ಸವಗಳಲ್ಲಿ ಅನ್ಯಧರ್ಮ ವ್ಯಾಪಾರಿಗಳಿಗೆ ಅವಕಾಶ ನೀಡಬಾರದೆಂದು ಪ್ಲೆಕ್ಸ್, ಬ್ಯಾನರ್ ಹಾಕಿ ನಿಷೇಧ ಹೇರುವ ಮೂಲಕ ಸೌಹಾರ್ದ ಸಾಮರಸ್ಯವನ್ನು ಹದಗೆಡಿಸುತ್ತಿರುವ ಪ್ರಕರಣಗಳು ರಾಜ್ಯಾದ್ಯಂತ ವರದಿಯಾಗುತ್ತಿದ್ದು,  ಸದ್ಯ ಕಾಫಿನಾಡಿಗೂ ಕಾಲಿಟ್ಟಿದೆ.

ಹಿಂದೂ ಧರ್ಮೀಯರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅನ್ಯ ಧರ್ಮದ ವ್ಯಾಪಾರಿಗಳಿಗೆ ಮಳಿಗೆ ಹಾಕಲು ಅವಕಾಶ ನೀಡಬಾರದೆಂದು ಆಗ್ರಹಿಸಿ ಗ್ರಾಮಸ್ಥರ ಹೆಸರಿನಲ್ಲಿ ಕೆಲ ಮುಖಂಡರು ವಿವಿಧ ಗ್ರಾಮ ಪಂಚಾಯತ್‍ಗಳಿಗೆ ಮನವಿ ಸಲ್ಲಿಸಿರುವ ಪ್ರಕರಣ ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ವರದಿಯಾಗಿದೆ.

ಜಿಲ್ಲೆಯ ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿರುವ ಕಿಗ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಿಗ್ಗಾ ಗ್ರಾಮದ ಋಷ್ಯಶೃಂಗ ದೇವಾಲಯ ಹಾಗೂ ಅಡ್ಡಗಡ್ಡೆ ಗ್ರಾಪಂ ವ್ಯಾಪ್ತಿಯಲ್ಲಿರುವ ಚಿತ್ತುವಳ್ಳಿ ಗ್ರಾಮದ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಇದೇ ತಿಂಗಳಾಂತ್ಯಕ್ಕೆ ನಡೆಯಲಿದ್ದು, ಈ ಜಾತ್ರಾ ಮಹೋತ್ಸವ ಕಾರ್ಯಕ್ರಮದ ವೇಳೆ ಇತರ ಧರ್ಮೀಯರ ವ್ಯಾಪಾರಕ್ಕೆ ಮಳಿಗೆ ನೀಡಬಾರದು ಎಂದು ಒತ್ತಾಯಿಸಿ ಸಂಬಂಧಿಸಿದ ಎರಡೂ ಗ್ರಾಮ ಪಂಚಾಯತ್‍ಗಳಿಗೆ ಸಂಘಪರಿವಾರದ ಕೆಲ ಮುಖಂಡರು ಗ್ರಾಮಸ್ಥರ ಹೆಸರಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಕಿಗ್ಗಾ ಹಾಗೂ ಚಿತ್ತುವಳ್ಳಿ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವವು ಹಿಂದೂ ಧರ್ಮದ ಸಂಪ್ರದಾಯದಂತೆ ನಡೆಯುತ್ತಿದ್ದು, ಹಿಂದೂ ಧರ್ಮದ ಜಾತ್ರಾ ಮಹೋತ್ಸವದ ಸಂದರ್ಭ ಇದುವರೆಗೂ ಎಲ್ಲ ಧರ್ಮದ ವ್ಯಾಪಾರಿಗಳಿಗೂ ಮಳಿಗೆಗಳನ್ನು ಹಾಕಲು ಅವಕಾಶ ನೀಡಲಾಗಿದೆ. ಈ ವೇಳೆ ಹಿಂದೂಯೇತರ ಧರ್ಮದವರು ಬೇರೆ ಊರುಗಳಿಂದ ವ್ಯಾಪಾರಕ್ಕೆ ಬಂದು ಸ್ಥಳೀಯ ದೇವಾಲಯ ಸೇರಿದಂತೆ ಗ್ರಾಮದ ಮಾಹಿತಿ ಪಡೆದು ಹೋಗುತ್ತಿದ್ದಾರೆ. ಅಲ್ಲದೇ ಅನ್ಯ ಧರ್ಮದವರು ವ್ಯಾಪಾರದಲ್ಲಿ ಗಳಿಸಿದ ಒಂದು ಪಾಲನ್ನು ಸಮಾಜ ಬಾಹಿರ ಕೃತ್ಯಕ್ಕೆ ಬಳಸಲು ನೀಡುತ್ತಿದ್ದಾರೆ. ಅಲ್ಲದೇ ಅನ್ಯಧರ್ಮದವರು ಜಾತ್ರೆಗೆ ವ್ಯಾಪಾರಕ್ಕೆ ಬಂದು ದೇವಾಲಯಗಳ ಪಾವಿತ್ರ್ಯಕ್ಕೆ ಕುಂದುಂಟು ಮಾಡುತ್ತಿದ್ದಾರೆ ಎಂದು ಮುಖಂಡರು ಸಲ್ಲಿಸಿರುವ ಮನವಿಯಲ್ಲಿ ಅವಹೇಳಕಾರಿಯಾದ ಆರೋಪ ಹೊರಿಸಲಾಗಿದೆ.

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇದಿಸಿ ಹೈಕೋರ್ಟ್ ತೀರ್ಪು ನೀಡಿದ ಸಂದರ್ಭದಲ್ಲಿ ಒಂದು ಕೋಮಿನ ಜನರು ತೀರ್ಪಿಗೆ ಬೆಲೆ ನೀಡದೇ ನ್ಯಾಯಾಲಯದ ವಿರುದ್ಧ ರಾಜ್ಯ ಬಂದ್‍ಗೆ ಕರೆ ನೀಡುವ ಮೂಲಕ ದೇಶದ ಸಂವಿಧಾನ ಹಾಗೂ ಕಾನೂನು ವಿರೋಧಿ ನಿಲುವು ತಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಗ್ಗಾ ಹಾಗೂ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವ ಸಂದರ್ಭ ಅನ್ಯಧರ್ಮದವರು ವ್ಯಾಪಾರ ನಡೆಸಲು ಸ್ಥಳಾವಕಾಶ ನೀಡಬಾರದು ಎಂದು ಮುಖಂಡರು ಕಿಗ್ಗಾ ಹಾಗೂ ಅಡ್ಡಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ಮನವಿ ಸಲ್ಲಿಸಿರುವ ಪ್ರಕರಣ ನಡೆದಿದೆ.

ಕಿಗ್ಗಾ ಹಾಗೂ ದುರ್ಗಾ ಪರಮೇಶ್ವರಿ ಜಾತ್ರೆ ಶೃಂಗೇರಿ ತಾಲೂಕಿನಲ್ಲಿ ನಡೆಯುವ ಪ್ರಸಿದ್ಧ ಜಾತ್ರಾ ಮಹೋತ್ಸವಗಳಾಗಿದ್ದು, ಈ ಜಾತ್ರೆಯಲ್ಲಿ ಎಲ್ಲ ಧರ್ಮದ ವ್ಯಾಪಾರಿಗಳು ಪರಸ್ಪರ ಸಾಮರಸ್ಯದಿಂದ ವ್ಯಾಪಾರ ಮಾಡುವುದು ವಾಡಿಕೆಯಾಗಿದೆ. ಆದರೆ ಕೆಲ ಮತೀಯ ಸಂಘಟನೆಗಳ ಮುಖಂಡರಿಂದಾಗಿ ಕಾಫಿನಾಡಿನಲ್ಲೂ ಈ ಸಂಬಂಧ ಗೊಂದಲ ಸೃಷ್ಟಿಸಲಾಗುತ್ತಿದೆ . ಈ ಮನವಿಗಳಿಗೆ ಗ್ರಾಮ ಪಂಚಾಯತ್ ಇದುವರೆಗೂ ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News