ಶಾಸಕ ರೇಣುಕಾಚಾರ್ಯ ಪುತ್ರಿಗೆ ನಕಲಿ ಜಾತಿ ಪ್ರಮಾಣ ಪತ್ರ: ಕ್ರಮಕ್ಕೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಸದಸ್ಯರ ಧರಣಿ

Update: 2022-03-23 17:02 GMT

ಬೆಂಗಳೂರು, ಮಾ. 23: ‘ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಪುತ್ರಿ ಎಂ.ಆರ್.ಚೇತನಾ ‘ಬೇಡ ಜಂಗಮ' ಹೆಸರಿನಲ್ಲಿ ಪರಿಶಿಷ್ಟ ಜಾತಿಯ(ಎಸ್ಸಿ) ಪ್ರಮಾಣ ಪತ್ರ ಪಡೆದುಕೊಂಡಿರುವುದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಅಲ್ಲದೆ, ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಅಪರಾಧ. ಹೀಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ನಡೆಯಿತು.

ಬುಧವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ಉಪ ನಾಯಕ ಯು.ಟಿ.ಖಾದರ್, ‘ಮುಸ್ಲಿಮ್ ವರ್ತಕರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರುವ ಮೂಲಕ ಸಾಮರಸ್ಯಕ್ಕೆ ದಕ್ಕೆ ತರಲು ಕೆಲ ಕ್ರೂರ ಮನಸ್ಸಿನ ಹೇಡಿಗಳು ಪ್ರಯತ್ನ ನಡೆಸಿದ್ದಾರೆ' ಎಂದು ಆರೋಪಿಸಿದರು. ಈ ವೇಳೆ ರೇಣುಕಾಚಾರ್ಯ ಯಾರೂ ಹೇಡಿಗಳು ಎಂದು ಪ್ರಶ್ನಿಸಿದ್ದಕ್ಕೆ ‘ನೀವು ನಿಮ್ಮ ಪುತ್ರಿ ಹೆಸರಿನಲ್ಲಿ ಖೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದೀರಿ, ನೀವು ಏನು ಮಾತನಾಡುತ್ತೀರಿ' ಎಂದು ಖಾದರ್ ತಿರುಗೇಟು ನೀಡಿದರು.

ಗಲ್ಲಿಗೇರಲು ಸಿದ್ಧ: ‘ನಾನು ಅಥವಾ ನನ್ನ ಕುಟುಂಬದ ಸದಸ್ಯರು ‘ಬೇಡ ಜಂಗಮ' ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದು ಸಾಬೀತಾದರೆ ನಾನು ಗಲ್ಲಿಗೇರಲು ಸಿದ್ಧ. ನಕಲಿ ಜಾತಿ ಪ್ರಮಾಣಪತ್ರ ನಾನು ಪಡೆದುಕೊಂಡು ಯಾವುದೇ ಸರಕಾರಿ ಸೌಲಭ್ಯ ಪಡೆದಿರುವುದನ್ನು ಸಾಬೀತು ಮಾಡಲಿ. ನಾನು ಯಾವುದೇ ಶಿಕ್ಷೆಗೆ ತಯಾರಿದ್ದೇನೆ' ಎಂದು ರೇಣುಕಾಚಾರ್ಯ ಸವಾಲು ಹಾಕಿದರು.

‘ಈ ಹಿಂದೆ ಕಲಬುರಗಿಯಲ್ಲಿ ಉಮೇಶ್ ಜಾಧವ್ ಸ್ಪರ್ಧಿಸಿದಾಗ ನನ್ನ ಸಹೋದರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ನನ್ನ ಸಹೋದರ ಹಾಗೂ ನಾನು ಮನೆಯಿಂದ ಇಬ್ಭಾಗ ಆಗಿ 25 ವರ್ಷ ಆಗಿದೆ. ನಾನು ಹೊನ್ನಾಳ್ಳಿ ಕ್ಷೇತ್ರದ ಜಾತ್ಯತೀತ ವ್ಯಕ್ತಿ. ಎರಡು ಸಾವಿರ ಜಾತಿ ಮತಗಳು ಇಲ್ಲ. ಎಲ್ಲ ಸಮುದಾಯದವರು ನನ್ನನ್ನು ಗೌರವಿಸುತ್ತಾರೆ. ನನ್ನನ್ನು ಪ್ರೀತಿಸುತ್ತಾರೆ. ನನ್ನ ನಕಲಿ ಜಾತಿ ಪ್ರಮಾಣ ಪತ್ರ ಇದ್ದರೆ ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದರು.

‘ನನ್ನ ಸಹೋದರ ನನ್ನ ಪುತ್ರಿ ಹೆಸರಿಗೆ ಜಾತಿ ಪ್ರಮಾಣ ಪತ್ರ ಕೊಡಿಸಿದ್ದು, ಅದನ್ನು ರದ್ದುಪಡಿಸುವಂತೆ ನಾನೇ ತಿಳಿಸಿದ್ದೇನೆ. ಆತ ಚುನಾವಣೆಗೆ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ ನಾನೇ ಖುದ್ದು ಆತನಿಗೆ ನಾಮಪತ್ರ ಹಿಂಪಡೆಯಲು ಸೂಚನೆ ನೀಡಿದ್ದೇನೆ. ಹೀಗಾಗಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿಲ್ಲ. ನಿನ್ನೆ ಶಾಸಕ ಗೂಳಿಹಟ್ಟಿ ಶೇಖರ್, ನನ್ನ ಹೆಸರನ್ನು ಉಲ್ಲೇಖ ಮಾಡಿದ್ದು ಸ್ಪಷ್ಟಣೆ ನೀಡಿದ್ದೇನೆ' ಎಂದರು.

ಈ ವೇಳೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಮಾಧುಸ್ವಾಮಿ, ‘ಈ ಮನೆಯ ಸದಸ್ಯ ಎಂ.ಪಿ.ರೇಣುಕಾಚಾರ್ಯ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆಂದು ಖಾದರ್ ಅವರು ಆರೋಪ ಮಾಡುವುದು ಸರಿಯಲ್ಲ. ಆ ಪದವನ್ನು ಕಡತದಿಂದ ತೆಗೆದು ಹಾಕಬೇಕು' ಎಂದು ಆಗ್ರಹಿಸಿದರು. ಆ ಪದವನ್ನು ಪರಿಶೀಲಿಸಿ ತೆಗೆದು ಹಾಕಲಾಗುವುದು ಎಂದು ಸ್ಪೀಕರ್ ರೂಲಿಂಗ್ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಸಿಎಂ ರಾಜಕೀಯ ಕಾರ್ಯದರ್ಶಿಯೂ ಆಗಿರುವ ರೇಣುಕಾಚಾರ್ಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಸೌಲಭ್ಯ ಪಡೆದಿಲ್ಲ ಎಂಬುದು ಬೇರೆ. ಆದರೆ, ಯಾರೇ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವುದು ಅಪರಾಧ. ಯಾವ ಉದ್ದೇಶಕ್ಕಾಗಿ ತನ್ನದಲ್ಲದ ಜಾತಿ ಹೆಸರಿನಲ್ಲಿ ಪ್ರಮಾಣ ಪತ್ರ ಪಡೆದಿದ್ದು' ಎಂದು ಪ್ರಶ್ನಿಸಿದರು.

‘2014ರಲ್ಲಿ ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದಿಂದ ರೇಣುಕಾಚಾರ್ಯ ಅವರ ಸಹೋದರ ಬೇಡ ಜಂಗಮ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಅವರೇ ಹೇಳಿದ್ದಾರೆ. ಇದು ಅಪರಾಧ. ಅವರ ಸಹೋದರ ತೆಗೆದುಕೊಂಡಿದ್ದು, ಅವರು-ಇವರು ಬೇರೆ ಬೇರೆ ಆಗಿದ್ದಾರೆ ಒಕೆ. ಆದರೆ ನಿಮ್ಮ(ರೇಣುಕಾಚಾರ್ಯ) ಪುತ್ರಿ ಹೆಸರಿನಲ್ಲಿ ನಕಲಿ ಜಾತಿ ಜಾತಿ ಪ್ರಮಾಣ ಪತ್ರ ತೆಗೆದುಕೊಂಡರೆ ಅದು ಅಪರಾಧ, ಅದಕ್ಕೆ ನೀವೇ ಜವಾಬ್ದಾರರು' ಎಂದು ಸಿದ್ದರಾಮಯ್ಯ ಹೇಳಿದರು.

ತನಿಖೆ ಆಗಲಿ: ‘ನಕಲಿ ಜಾತಿ ಪ್ರಮಾಣ ಪತ್ರ ಗದ್ದಲಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಯಾರೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡರೆ ಅಪರಾಧ, ತಪ್ಪಿತಸ್ಥರಿಗೆ ಶಿಕ್ಷೆ ಏನಾಗಬೇಕೆಂಬ ಕಾನೂನು ಇದೆ. ಯಾರಿಗೆ ಅನ್ಯಾಯ ಆಗಿದೆ ಅವರು ಪ್ರಕ್ರಿಯೆ ಕಾನೂನು ರೀತಿಯಲ್ಲಿ ಸಂಬಂಧಪಟ್ಟ ಸಂಸ್ಥೆಗಳಿಗೆ ದೂರು ನೀಡಲಿ, ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲಿ. ನಾವು ಯಾರ ಪರ ಹಾಗೂ ವಿರುದ್ಧವಾಗಿ ಮಾತನಾಡುವುದರಿಂದ ಸಾಧನೆ ಆಗುವುದಿಲ್ಲ' ಎಂದರು.

‘ರೇಣುಕಾಚಾರ್ಯ ಶಾಸಕರಾಗಿದ್ದು, ಸಾರ್ವಜನಿಕ ಜೀವನದಲ್ಲಿದ್ದಾರೆ. ಅವರ ನಿಲುವನ್ನು ಪ್ರಾಮಾಣಿಕವಾಗಿ ಹೇಳಿದ್ದಾರೆ. ದಾಖಲೆಗಳ ಪರಿಶೀಲನೆ ನಡೆದರೆ ತಪ್ಪು-ಸರಿ ಗೊತ್ತಾಗಲಿದೆ. ಒಂದು ವೇಳೆ ತಪ್ಪಿದ್ದರೆ ಕಾನೂನು ರೀತಿಯಲ್ಲಿ ಯಾರೇ ಆಗಿದ್ದರೂ ಕ್ರಮ ಆಗುತ್ತದೆ. ಆದರೆ, ನಾವು ಇಲ್ಲಿ ಕುಳಿತುಕೊಂಡು ಯಾವುದೇ ತೀರ್ಪು ನೀಡುವುದು ಒಳ್ಳೆಯದಲ್ಲ' ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಣೆ ನೀಡುವ ಮೂಲಕ ಚರ್ಚೆಗೆ ಕೊನೆ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News