×
Ad

ರಾಜ್ಯಕ್ಕೆ ಕೇಂದ್ರದ ತೆರಿಗೆ ಪಾಲು, ಅನುದಾನ ಇಳಿಕೆ: ಸಿಎಜಿ ವರದಿಯಲ್ಲಿ ಉಲ್ಲೇಖ

Update: 2022-03-23 23:06 IST

ಬೆಂಗಳೂರು, ಮಾ. 23: ‘2004-5ರಿಂದ ರಾಜಸ್ವ ಹೆಚ್ಚುವರಿಯನ್ನು ದಾಖಲಿಸಿದ ಕರ್ನಾಟಕವು 2020-21ರಲ್ಲಿ ಮೊದಲ ಬಾರಿಗೆ ರಾಜಸ್ವ ಕೊರತೆಯನ್ನು ಕಂಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 2020-21ನೆ ಸಾಲಿನಲ್ಲಿ ಸರಕಾರವು ತನ್ನ ರಾಜಸ್ವ ಸ್ವೀಕೃತಿಯಲ್ಲಿ ಶೇ.10.67ರಷ್ಟು ಇಳಿಕೆಯನ್ನು ದಾಖಲಿಸಿದೆ’ ಎಂದು ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ(ಸಿಎಜಿ) ವರದಿ ತಿಳಿಸಿದೆ.

ಬುಧವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, 2021ನೆ ಸಾಲಿನ ಹಣಕಾಸಿನ ವ್ಯವಹಾರ ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೇಂದ್ರ ತೆರಿಗೆಗಳು ಮತ್ತು ಸುಂಕಗಳಲ್ಲಿನ ರಾಜ್ಯದ ಪಾಲು ಮತ್ತು ಕೇಂದ್ರ ಸರಕಾರದಿಂದ ಸಹಾಯಾನುದಾನವು ಕ್ರಮವಾಗಿ ಶೇ.29.84 ಮತ್ತು ಶೇ.12.77ರಷ್ಟು ಕಡಿಮೆಯಾಗಿದೆ. ಕೇಂದ್ರದಿಂದ 2016-17ರಲ್ಲಿ 15,703 ಕೋಟಿ ರೂ.ಗಳಿಂದ 2019-20ಕ್ಕೆ 34,480 ಕೋಟಿ ರೂ.ಗಳಿಗೆ ಹೆಚ್ಚಳವಾಗಿದ್ದು, 2020-21ರಲ್ಲಿ ಅದು 30,076 ಕೋಟಿ ರೂ.ಗಳಿಗೆ ಇಳಿಕೆಯಾಗಿದ್ದು 4,404 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ ಎಂದು ಉಲ್ಲೇಖಿಸಿದೆ.

‘ರಾಜ್ಯದ ತೆರಿಗೆ ರಾಜಸ್ವದ ಅನುಪಾತವು 2016-17ರಲ್ಲಿದ್ದ ಶೇ.6.87ರಿಂದ 2020-21ರಲ್ಲಿ ಶೇ.5.38ಕ್ಕೆ ಇಳಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2020-21ನೆ ಸಾಲಿನಲ್ಲಿ ರಾಜ್ಯದ ಸ್ವಂತ ತೆರಿಗೆ ರಾಜಸ್ವವು 5,311 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ‘ಶೇ.85ರಷ್ಟು ರಾಜಸ್ವ ವೆಚ್ಚ ಸಂಬಳ, ಬಡ್ಡಿ ಪಾವತಿಗಳು, ಪಿಂಚಣಿ, ಸಹಾಯಧನ, ಸಹಾಯಾನುದಾನ ಮತ್ತು ಹಣಕಾಸಿನ ನೆರವು, ಆಡಳಿತಾತ್ಮಕ ವೆಚ್ಚಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮುಂತಾದವುಗಳ ಮೇಲಿನ ಬದ್ಧವೆಚ್ಚವನ್ನು ಒಳಗೊಂಡಿದೆ. ಹೀಗಾಗಿ ವೇತನ, ಪಿಂಚಣಿ ಮತ್ತು ಬಡ್ಡಿಯ ವೆಚ್ಚಗಳು ಹೆಚ್ಚಾಗಿರುವುದರಿಂದ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ ಸ್ಥಿರವಾಗಿ ಹೆಚ್ಚುತ್ತಿರುವ ಸಹಾಯಧನ, ಸಹಾಯಾನುದಾನದ ಮೇಲಿನ ವೆಚ್ಚಗಳು ಮುಂತಾದವುಗಳ ಮೇಲೆ, ಫಲಾನುಭವಿಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಆದ್ಯ ಗಮನ ನೀಡಬೇಕು ಎಂದು ಸಿಎಜಿ ಸಲಹೆ ಮಾಡಿದೆ.

ಅಪೂರ್ಣ ಯೋಜನೆಗಳಿಗೆ ಹಣ: ‘ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ವೆಚ್ಚದಲ್ಲಿ ಬಂಡವಾಳ ವೆಚ್ಚದ ಪಾಲು ಶೇ.21ರಷ್ಟಿತ್ತು. 2020-21ರ ಅಂತ್ಯದ ವೇಳೆಗೆ ಒಟ್ಟು 3,628 ಕೋಟಿ ರೂ. ಹಣವನ್ನು ಅಪೂರ್ಣ ಯೋಜನೆಗಳಲ್ಲಿ ತೊಡಗಿಸಲಾಗಿದೆ. ಸರಕಾರ ಅಪೂರ್ಣ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಬೇಕು’ ಎಂದು ಸೂಚಿಸಿದೆ.

‘ಸರಕಾರ ನಷ್ಟ ಅನುಭವಿಸುತ್ತಿರುವ ಸಾರ್ವಜನಿಕ ವಲಯದ ಉದ್ಯಮಗಳ ಕೆಲಸವನ್ನು ಪರಿಶೀಲಿಸಬೇಕು ಮತ್ತು ಹೂಡಿಕೆ, ಪುನಶ್ಚೇತನ, ಮುಚ್ಚುವಿಕೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಸಿರು ತೆರಿಗೆಯಡಿ ಸಂಗ್ರಹವಾದ 10.86 ಕೋಟಿ ರೂ. ಮತ್ತು ರಸ್ತೆ ಸುರಕ್ಷತೆ ತೆರಿಗೆಗಳಡಿ ಸಂಗ್ರಹವಾದ 87.65 ಕೋಟಿ ರೂ. ಹಣವನ್ನು ನಿಧಿ ಲೆಕ್ಕಕ್ಕೆ ವರ್ಗಾಯಿಸಿಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಮೀಸಲು ನಿಧಿಗಳ ನಿರ್ವಹಣೆ ಮತ್ತು ಹೂಡಿಕೆಗಳ ಮಾದರಿಗೆ ಸಂಬಂಧಪಟ್ಟಂತೆ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News