ಜಾತ್ರಾ ಮಹೋತ್ಸವಗಳಲ್ಲಿ ಮುಸ್ಲಿಮರ ಅಂಗಡಿಗಳಿಗೆ ನಿರಾಕರಣೆ ಸರಿಯಲ್ಲ: ಕುಮಾರಸ್ವಾಮಿ
ಬೆಂಗಳೂರು, ಮಾ.23: ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ರಾಜಕಾರಣವೇ ಬೇರೆ, ಅಲ್ಲಿನ ಪರಿಸ್ಥಿತಿಯನ್ನು ಇಲ್ಲಿ ನಿರ್ಮಿಸಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ಧಾರ್ಮಿಕ ಕ್ಷೇತ್ರದಲ್ಲಿ ಬೇರೆ ಸಮಾಜದವರು ಮಳಿಗೆ ಹಾಕುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಾತ್ರಾ ಮಹೋತ್ಸವಗಳು ಧಾರ್ಮಿಕ ಕ್ಷೇತ್ರದ ಆವರಣದಲ್ಲಿ ನಡೆಯುವುದಿಲ್ಲ ಎಂದರು.
ಹೈಕೋರ್ಟ್‍ನಲ್ಲಿ ಹಿಜಾಬ್ ಬಗ್ಗೆ ಬಂದಂತಹ ತೀರ್ಪಿನ ಬಗ್ಗೆ ಬಂದ್‍ಗೆ ಕರೆ ನೀಡಿದ್ದಾರೆ. ಆದುದರಿಂದ, ಮುಸ್ಲಿಮರ ಮಳಿಗೆ ಹಾಕಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಎಂಬ ಮಾತನ್ನು ಕೇಳಿದ್ದೇನೆ. ಬಂದ್‍ಗೆ ಕರೆ ನೀಡುವುದು ಹೊಸದೇನಲ್ಲ. ಹಲವಾರು ಸಂಘಗಳು ಬಂದ್‍ಗೆ ಕರೆ ನೀಡಿವೆ. ಹಾಗಂತ ಅವರನ್ನು ಸಮಾಜದಿಂದ ಹೊರಗೆ ಇಡುತ್ತೇವೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಇಂತಹ ಕೋಮು ದಳ್ಳೂರಿಯ ವಾತಾವರಣ ಸಮಾಜದಲ್ಲಿ ನಿರ್ಮಾಣ ಮಾಡಿಕೊಂಡು ಹೋದರೆ, ನಾವು ಎಲ್ಲಿಗೆ ಹೋಗಿ ತಲುಪುತ್ತೇವೆ. ಮುಸ್ಲಿಂ ಧಾರ್ಮಿಕ ಗುರುಗಳು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಲು ತಿಳಿಸಿದ್ದರು. ಅದರಂತೆ ಎಲ್ಲಿಯೂ ಯಾವುದೆ ಅಹಿತಕರ ಘಟನೆಗಳು ಆಗದಂತೆ ಅವರು ಪ್ರತಿಭಟನೆ ಮಾಡಿದ್ದಾರೆ. ಜಾತ್ರೆಯಂತೆಯೇ ಉರೂಸ್ ನಡೆಯುವ ಜಾಗದಲ್ಲಿ ಹಿಂದೂಗಳು ಹೋಗಿ ಮಳಿಗೆಗಳನ್ನು ಹಾಕುತ್ತಾರೆ. ಮುಸ್ಲಿಮರು ಅಲ್ಲಿ ಖರೀದಿ ಮಾಡುತ್ತಾರೆ ಎಂದು ಅವರು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಯು.ಟಿ.ಖಾದರ್, ದೇವಸ್ಥಾನದ ಆಡಳಿತ ಮಂಡಳಿ ಏನೇ ತೀರ್ಮಾನ ಮಾಡಿದರೂ ಎಲ್ಲರೂ ಗೌರವ ನೀಡುತ್ತಾರೆ. ಕೆಲವರು ಹೋಗಿ ಆ ದೇವಸ್ಥಾನದ ಆಡಳಿತ ಮಂಡಳಿಯ ಹೆಸರಿನಲ್ಲಿ ಒಂದು ಬ್ಯಾನರ್, ಪೋಸ್ಟರ್ ಹಾಕಿ ಸಮಸ್ಯೆ ಸೃಷ್ಟಿ ಮಾಡುತ್ತಾರೆ ಎಂದರು.
ಇದಕ್ಕೆ ಬಿಜೆಪಿ ಶಾಸಕ ರಘುಪತಿ ಭಟ್ ಸಹಮತ ವ್ಯಕ್ತಪಡಿಸಿ, ಅನಾಮಧೇಯ ಬ್ಯಾನರ್ ತೆಗೆಸಿ ಜೊತೆಗೆ, ಹಿಜಾಬ್ ನನ್ನ ಹಕ್ಕು ಎಂದು ಹಾಕಿರುವ ಪೋಸ್ಟರ್ ಅನ್ನು ತೆಗೆಯಬೇಕು ಎಂದರು.