ಮುಸ್ಲಿಮ್ ಹೆಣ್ಣು ಮಕ್ಕಳ ಶೈಕ್ಷಣಿಕ ಭವಿಷ್ಯ ಉಳಿಸುವಂತೆ ಸರಕಾರಕ್ಕೆ ಕುಮಾರಸ್ವಾಮಿ ಸಲಹೆ

Update: 2022-03-23 18:13 GMT

ಬೆಂಗಳೂರು, ಮಾ.23: ಕೇಂದ್ರೀಯ ವಿದ್ಯಾಲಯಗಳಲ್ಲಿ 2012ರಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡಿದ್ದಾರೆ. ಈವರೆಗೆ ಅಲ್ಲಿ ಯಾವುದೆ ಬದಲಾವಣೆಯಿಲ್ಲ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವೆ ಅದಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಬುಧವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ನೀವು ದೂರದೃಷ್ಟಿಯಿಂದ ಆಲೋಚನೆ ಮಾಡಿ ತೀರ್ಮಾನ ಮಾಡಿ. ಹೆಣ್ಣು ಮಕ್ಕಳು ಒಂದೊಂದು ರೀತಿಯಲ್ಲಿ ದುಪಟ್ಟಾ ಬಳಸುತ್ತಾರೆ. ಆದುದರಿಂದ, ನೀವು ನಿಗದಿ ಮಾಡಿರುವ ಸಮವಸ್ತ್ರವನ್ನೆ ಅವರು ಧರಿಸುವ ನಿಟ್ಟಿನಲ್ಲಿ ಅವಕಾಶ ಮಾಡಿಕೊಡಬೇಕು ಎಂದರು.

ಸರಕಾರದ ತೀರ್ಮಾನಗಳಿಂದ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ. ಅದನ್ನು ಸರಿಪಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಅವರು ಹೃದಯ ವೈಶಾಲ್ಯತೆ ತೋರಬೇಕು. ಅದರಂತೆ ಸರಕಾರ ತೀರ್ಮಾನಕ್ಕೆ ಬಂದರೆ ಪರಿಸ್ಥಿತಿ ತಿಳಿಯಾಗಬಹುದು ಎಂದು ಕುಮಾರಸ್ವಾಮಿ ಹೇಳಿದರು.

ಹಿಜಾಬ್ ವಿಚಾರದಲ್ಲಿ ಉಡುಪಿಯ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭವಾದ ಘಟನೆಯನ್ನು ಆರಂಭದಲ್ಲೆ ಚಿವುಟಿ ಹಾಕಿದ್ದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳು ಆಗುತ್ತಿರಲಿಲ್ಲ. ಈ ರೀತಿಯ ವಾತಾವರಣ ನಿರ್ಮಾಣಕ್ಕೆ ಕಾಣದ ಕೈಗಳು ಹಿಂದಿವೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಪ್ರಸ್ತಾಪಿಸಿದೆ. ಅವರ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಹೆಣ್ಣು ಮಕ್ಕಳನ್ನು ದಾರಿತಪ್ಪಿಸುವ ಕೆಲಸ ನಡೆದಿದೆ. ಸರಕಾರಿ ಶಾಲಾ, ಕಾಲೇಜುಗಳಲ್ಲಿ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಇರಲಿಲ್ಲ. ಮಕ್ಕಳಲ್ಲಿ ಹಾಲಿನಂತ ಶುಭ್ರವಾದ ಮನಸ್ಸು, ಕಲ್ಮಶ ಇರಲ್ಲ. ಅವರ ಮನಸ್ಸುಗಳ ಮೇಲೆ ಹುಳಿ ಹಿಂಡುವ ಕೆಲಸ ಕೆಲವರು ಮಾಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು. 

ಶಿವಮೊಗ್ಗದಲ್ಲಿ ಒಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಉಡುಪಿಯ ಸಮವಸ್ತ್ರದ ಸಂಘರ್ಷವೆ ಕಾರಣ ಎಂಬ ಮಾತುಗಳು ಆರಂಭದಲ್ಲಿ ಕೇಳಿಬಂದವು. ಈ ಹತ್ಯೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕೆಲವರನ್ನು ಸರಕಾರ ಬಂಧಿಸಿದೆ, ಆದರೆ, ಪ್ರಕರಣದ ಬಗ್ಗೆ ಸಮಗ್ರವಾಗಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ನಾಡಿನ ಜನತೆಯ ಮುಂದೆ ಇಡಬೇಕು ಎಂದು ಅವರು ಆಗ್ರಹಿಸಿದರು. 

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದ್ದೇವೆ. ನಮ್ಮ ರಾಜ್ಯದಲ್ಲಿ ಈ ರೀತಿಯ ಬೆಳವಣಿಗೆ ನೋಡುತ್ತೇವೆ ಎಂದು ಕನಸು ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ. ನಮ್ಮ ರಾಜ್ಯ ಅತ್ಯಂತ ಶಾಂತಿಪ್ರಿಯ. ಇಲ್ಲಿ ದ್ವೇಷದ ದಳ್ಳೂರಿಗೆ ನಮ್ಮನ್ನು ನಾವೆ ದೂಡಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಪರಿಶುದ್ಧ ಮನಸ್ಸಿನಿಂದ ಶಾಲೆ, ಕಾಲೇಜಿಗೆ ಹೋಗುವ ಮಕ್ಕಳು ಈಗ ಬೀದಿ ಬಂದು ಹೋರಾಟ ಮಾಡುವ ಪರಿಸ್ಥಿತಿಯಿದೆ. ಜೊತೆಗೆ, ಪೋಷಕರು ಹೊರಗೆ ಬರಬೇಕಾಯಿತು. ಕಲ್ಲು ತೂರಾಟ ನಡೆಯಿತು, ಯಾರು ಕಾರಣ? ಶಿವಮೊಗ್ಗದಲ್ಲಿ ಲಾಠಿ ಚಾರ್ಜ್, ನಿಷೇಧಾಜ್ಞೆ, ಬಾಗಲಕೋಟೆಯಲ್ಲಿ ಅತಿಥಿ ಶಿಕ್ಷಕರ ತಲೆ ಬುರುಡೆ ಹೊಡೆದಿದ್ದಾರೆ. ಶಾಲಾ, ಕಾಲೇಜುಗಳ ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿ ಎಂದು ಅವರು ಹೇಳಿದರು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಅನಾಹುತದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ಸಾಕಷ್ಟು ಹಿನ್ನಡೆಯಾಗಿದೆ. ಇವತ್ತು ಸಹ ಹಲವಾರು ಕುಟುಂಬಗಳು ಮಕ್ಕಳಿಗೆ ಶಾಲೆಗಳನ್ನು ಕಳುಹಿಸಲು ಆಗದೆ ಇರುವ ಪರಿಸ್ಥಿತಿಯಿದೆ. ಸರಕಾರದ ಅಂಕಿ ಅಂಶದ ಪ್ರಕಾರ ಮಕ್ಕಳು ಶಾಲೆಗೆ ಹಾಜರಾತಿ ಕಡಿಮೆಯಾಗಿದೆ. ಅಸಂಖ್ಯಾತ ಮಕ್ಕಳ ಭವಿಷ್ಯ ಅಂಧಕಾರದಲ್ಲಿದೆ ಎಂದು ಅವರು ಹೇಳಿದರು.

ಹೆಣ್ಣು ಮಕ್ಕಳಿಗೆ ಶಿಕ್ಷಣದಲ್ಲಿ ಉತ್ತಮವಾದ ವಾತಾವರಣ ನಿರ್ಮಾಣ ಮಾಡಿದ ನಂತರ ಹಂತ ಹಂತವಾಗಿ ಸಮಾಜದಲ್ಲಿದ್ದ ಮೌಢ್ಯಗಳು ಮರೆಯಾಗುತ್ತಾ ಹೋಗಿವೆ. ಸತಿ ಸಹಗಮನ ಪದ್ಧತಿ ಈಗ ಇಲ್ಲ. ಮುಸ್ಲಿಂ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರುವುದೆ ಕಷ್ಟವಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಆ ಸಮಾಜದ ಹೆಣ್ಣು ಮಕ್ಕಳು ಆಸಕ್ತಿಯಿಂದ ಶಾಲೆ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ಜ್ಞಾನ ಹೆಚ್ಚಾದ ಹಾಗೆ ಪರಿವರ್ತನೆ ಅವರಿಂದಲೆ ಆಗಬಹುದು ಎಂದು ಕುಮಾರಸ್ವಾಮಿ ಹೇಳಿದರು.

ಉಡುಪಿಯ ಕಾಲೇಜಿನಲ್ಲಿ ಈ ವಿಷಯ ಬಂದಾಗ ಎರಡೂವರೆ ತಿಂಗಳು ಯಾರು ಮಾತನಾಡಿಲ್ಲ. ನಮಗೆ ಹೆಣ್ಣು ಮಕ್ಕಳ ಶಿಕ್ಷಣ ಮುಖ್ಯ. ಕ್ಯಾಂಪಸ್ ವಿಚಾರ ಅಲ್ಲೆ ಬಗೆಹರಿಯಬೇಕು ಎಂಬುದು ನಮ್ಮ ನಿಲುವು ಆಗಿತ್ತು. ಅವರ ತಂದೆ, ತಾಯಿ, ಕಾಲೇಜಿನ ಆಡಳಿತ ಮಂಡಳಿ ಸಮಸ್ಯೆ ಬಗೆಹರಿಸಬಹುದು ಎಂದು ನಾವು ಸುಮ್ಮನಿದ್ದೆವು. ಅಲ್ಲದೆ, ಈ ವಿಷಯ ಮತ್ತಷ್ಟು ಹೆಚ್ಚಾದಾಗ ಎಲ್ಲಿ ಹಿಜಾಬ್ ಧರಿಸಲು ಅವಕಾಶ ಇತ್ತು ಅಲ್ಲಿ ಅವಕಾಶ ಕೊಡಬೇಕಿತ್ತು. ಎಲ್ಲಿ ಇರಲಿಲ್ಲ ಅಲ್ಲಿ ಬೇಡ. ಈಗ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಿ. ಘಟನೆಗೆ ಯಾರು ಕಾರಣ ಅನ್ನೋದು ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಯಾರು ಅಂತಹವರ ಬೆಂಬಲಕ್ಕೆ ನಿಲ್ಲುವುದಿಲ್ಲ.

ಯು.ಟಿ.ಖಾದರ್, ವಿರೋಧ ಪಕ್ಷದ ಉಪ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News