ಟ್ರಾನ್ಸ್ ಫಾರ್ಮರ್ ಸ್ಫೋಟ ಪ್ರಕರಣ: ಮೃತರ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ; ಸಚಿವ ಸುನೀಲ್ ಕುಮಾರ್

Update: 2022-03-24 12:03 GMT

ಬೆಂಗಳೂರು, ಮಾ. 24: ‘ಜ್ಞಾನಭಾರತಿ ಪೋಲೀಸ್ ಠಾಣೆ ವ್ಯಾಪ್ತಿಯ ಉಲ್ಲಾಳದ ಬಳಿಯ ಮಂಗನಹಳ್ಳಿಯಲ್ಲಿ ಟ್ರಾನ್ಸ್‍ಫಾರ್ಮರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟ ತಂದೆ ಮತ್ತು ಮಗಳಿಗೆ ತಲಾ 10 ಲಕ್ಷ ರೂ.ಪರಿಹಾರ ನೀಡಲಾಗುವುದು' ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಇಂದಿಲ್ಲಿ ಘೋಷಿಸಿದ್ದಾರೆ.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಎಸ್.ಸುರೇಶ್ ಕುಮಾರ್ ಹಾಗೂ ರಮೇಶ್ ಬೂಸನೂರ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ಮಂಗನಹಳ್ಳಿಯ ನಿವಾಸಿ ಶಿವರಾಜ್ ಮತ್ತು ಅವರ ಪುತ್ರಿ ಚೈತನ್ಯ ಮೃತಪಟ್ಟಿದ್ದಾರೆ. ಈ ದುರಂತ ಸಂಭವಿಸಬಾರದಿತ್ತು. ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ' ಎಂದು ತಿಳಿಸಿದರು.

‘ಮಂಗಳಮ್ಮನಹಳ್ಳಿಯ ಪವಿತ್ರ ಶಾಲೆ ಸಮೀಪದಲ್ಲಿರುವ 250 ಕೆವಿ ಟ್ರಾನ್ಸ್‍ಫಾರ್ಮರ್ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನಿನ್ನೆ ಸ್ಫೋಟಗೊಂಡಿದೆ. ಲೀಡ್ ವೈಯರ್ ಸುಟ್ಟು ಆಯಿಲ್ ಸೋರಿಕೆಯಾಗಿ ಟ್ರಾನ್ಸ್‍ಫಾರ್ಮರ್ ಸಿಡಿದಿದೆ. ಟಿಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ 12ಗಂಟೆಯ ಸುಮಾರಿಗೆ ಸಾರ್ವಜನಿಕರು ಬೆಸ್ಕಾಂ ಸಹಾಯವಾಣಿಗೆ ದೂರು ನೀಡಿದ್ದಾರೆ. ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸ್ಪೋಟಗೊಂಡಿದೆ' ಎಂದು ವಿವರಿಸಿದರು.

ಟಿಸಿ ಆಡಿಟ್: ‘ಮೃತರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಅಲ್ಲದೆ, ಬೆಸ್ಕಾಂ ಅಧಿಕಾರಿಗಳ ಸಭೆ ನಡೆಸಿದ್ದು, ಶಾಲೆ ಸಮೀಪ, ಸಾರ್ವಜನಿಕ ಸ್ಥಳಗಳಲ್ಲಿರುವ ಅಪಾಯಕಾರಿ ಟಿಸಿಗಳ ಆಡಿಟ್ ನಡೆಸಲು ಸೂಚಿಸಿದ್ದೇನೆ. ಹದಿನೈದು ವರ್ಷ ಹಳೆಯದಾದ ಟಿಸಿಗಳನ್ನು ಬದಲಾಯಿಸಲು ನಿರ್ದೇಶನ ನೀಡಿದ್ದೇನೆ. ಟ್ರಾನ್ಸ್‍ಫಾರ್ಮರ್ ದುರಂತಕ್ಕೆ ಸಂಬಂಧಿಸಿದಂತೆ ವರದಿ ನೀಡಲು ಸೂಚಿಸಿದ್ದು, ಕರ್ತವ್ಯಲೋಪ ಆಗಿದ್ದರೆ ಎಸಗಿದೆ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು' ಎಂದು ಸುನಿಲ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News