×
Ad

ಕೋವಿಡ್‍ನಿಂದ ಗುಣಮುಖರಾದವರಿಗೆ ಕ್ಷಯ ಸೋಂಕು: ಹೆಚ್ಚಿನ ಅಧ್ಯಯನಕ್ಕೆ ಸೂಚನೆ; ಸಚಿವ ಡಾ.ಕೆ.ಸುಧಾಕರ್

Update: 2022-03-24 18:51 IST

ಬೆಂಗಳೂರು, ಮಾ. 24: ‘ಕೋವಿಡ್‍ನಿಂದ ಗುಣಮುಖರಾದವರ ಪೈಕಿ ಹಲವರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಈ ಕುರಿತು ವಿಸ್ತೃತವಾದ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸೌಧದಲ್ಲಿ ನಡೆದ, ‘ವಿಶ್ವ ಕ್ಷಯರೋಗ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೋವಿಡ್‍ನಿಂದ ಗುಣಮುಖರಾದವರಿಗೆ ಮೊಟ್ಟ ಮೊದಲ ಬಾರಿಗೆ ಸರಕಾರದಿಂದಲೇ ಕ್ಷಯ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆಗೊಳಪಟ್ಟ 25ಲಕ್ಷ ಜನರಲ್ಲಿ 144 ಜನರಿಗೆ ಕ್ಷಯ ದೃಢಪಟ್ಟಿದೆ. ಕೋವಿಡ್ ಬಂದ ಬಳಿಕವೇ ಇವರಿಗೆ ಕ್ಷಯ ಬಂದಿದೆ. ಹೀಗಾಗಿ ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ. ರಾಜ್ಯವನ್ನು ಕ್ಷಯ ಮುಕ್ತ ಮಾಡುವ ಗುರಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ' ಎಂದು ನುಡಿದರು.

‘ಕೋವಿಡ್‍ನಂತೆಯೇ ಕ್ಷಯವೂ ಸಾಂಕ್ರಾಮಿಕ ರೋಗ. ಕೋವಿಡ್ ವೈರಸ್‍ನಿಂದ ಬಂದರೆ, ಕ್ಷಯವು ಬ್ಯಾಕ್ಟೀರಿಯಾದಿಂದ ಬರುತ್ತದೆ. 2030ರ ವೇಳೆಗೆ ಜಗತ್ತನ್ನು ಕ್ಷಯರೋಗದಿಂದ ಮುಕ್ತ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರಕಾರವು 2025ರೊಳಗೆ ಭಾರತವನ್ನು ಕ್ಷಯ ಮುಕ್ತ ಮಾಡಬೇಕು ಎಂಬ ಗುರಿ ಪ್ರಕಟಿಸಿದೆ. ಇದು ಕೇವಲ ವೈದ್ಯರು ಅಥವಾ ಸರಕಾರದಿಂದ ಸಾಧ್ಯವಿಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ' ಎಂದು ಅವರು ಪ್ರತಿಪಾದಿಸಿದರು.

‘ಸಾಮಾನ್ಯವಾಗಿ ರೋಗ ಬಂದ ಬಳಿಕ ಚಿಕಿತ್ಸೆ ಪಡೆಯಲಾಗುತ್ತದೆ. ಇದರ ಬದಲು ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯಲು ಆರಂಭಿಸಬೇಕು. ಎರಡು ವಾರಕ್ಕೂ ಹೆಚ್ಚು ಕಾಲ ಕೆಮ್ಮು, ಸಂಜೆ ಜ್ವರ, ತೂಕ ಇಳಿಕೆಯಾಗುವುದು ಮೊದಲಾದ ಲಕ್ಷಣ ಕಂಡುಬಂದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು. ಈಗ ಎಲ್ಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಕ್ಷಯ ಪರೀಕ್ಷೆ ಮಾಡುವ ಸೌಲಭ್ಯವಿದೆ. ಜನರು ಇಂತಹ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಬೇಕು. ಬೇಗ ಪರೀಕ್ಷೆ ಮಾಡಿಸಿದರೆ ಉತ್ತಮ ಚಿಕಿತ್ಸೆ ಪಡೆಯಬಹುದು' ಎಂದು ತಿಳಿಸಿದರು.

‘ಗ್ರಾಮೀಣ ಭಾಗಗಳಲ್ಲಿ ಜನರು ಕಾಯಿಲೆ ಇದ್ದರೂ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸುವುದಿಲ್ಲ. ಒಬ್ಬ ಕ್ಷಯ ರೋಗಿಯಿಂದ ಕನಿಷ್ಠ 10 ಜನರಿಗೆ ರೋಗ ಹರಡಬಹುದು. ಹೀಗಾದಲ್ಲಿ, ಒಬ್ಬರ ತಪ್ಪಿನಿಂದ ಎಲ್ಲರಿಗೂ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಈ ಕುರಿತು ಹೆಚ್ಚು ಜಾಗೃತಿ ಮೂಡಿಸಬೇಕಿದೆ. ರಾಜ್ಯ ಸರಕಾರ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷಕ್ಕೆ 5 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡುತ್ತಿದೆ' ಎಂದು ಸುಧಾಕರ್ ತಿಳಿಸಿದರು.

ರೋಗಿಯನ್ನು ದೂರ ಮಾಡಬಾರದು: ‘ಸಾಂಕ್ರಾಮಿಕ ರೋಗವೆಂದರೆ, ರೋಗಿಯ ವಿರುದ್ಧ ಯುದ್ಧ ಆರಂಭವಾಗಿಬಿಡುತ್ತದೆ. ಈ ರೀತಿಯ ಪರಿಸ್ಥಿತಿ ಸಮಾಜದಲ್ಲಿ ಉಂಟಾಗಬಾರದು. ಇದರಿಂದಾಗಿ ರೋಗಿಗಳು ಮಾನಸಿಕವಾಗಿ ಬಳಲುತ್ತಾರೆ. ಇಂತಹವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಕೋವಿಡ್ ಬಂದ ಬಳಿಕ ನಿಮ್ಹಾನ್ಸ್ ಸಂಸ್ಥೆಯು 25 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ನಡೆಸಿದೆ. ಇದೇ ರೀತಿ, ಕ್ಷಯದ ಚಿಕಿತ್ಸೆಯ ಜೊತೆಗೆ ರೋಗಿಗೆ ಹಾಗೂ ಕುಟುಂಬದವರಿಗೆ ಆಪ್ತ ಸಮಾಲೋಚನೆ ಮಾಡಬೇಕಿದೆ. ಕ್ಷಯ ಕಂಡುಬಂದ ಬಳಿಕ ಆ ಸೋಂಕು ರೋಗಿಯ ಮನೆಯವರಿಗೆ ಹರಡದಂತೆ ಎಚ್ಚರ ವಹಿಸಲು ಮಾರ್ಗದರ್ಶನ ನೀಡಬೇಕು' ಎಂದು ಅವರು ಹೇಳಿದರು.

ಕ್ಷಯ ನಿಯಂತ್ರಣ: ‘ಕ್ಷಯ ನಿಯಂತ್ರಣದಲ್ಲಿ ರಾಜ್ಯದ ಐದು ಜಿಲ್ಲೆಗಳಿಗೆ ಬೆಳ್ಳಿ ಪದಕ ಬಂದಿದೆ. ಈ ಜಿಲ್ಲೆಗಳಲ್ಲಿ ಹಿಂದಿನ ಸಾಲಿಗೆ ಹೋಲಿಸಿದರೆ ಈ ವರ್ಷ ಕ್ಷಯ ಪ್ರಕರಣಗಳ ಪ್ರಮಾಣ ಶೇ.40ರಷ್ಟು ಇಳಿಕೆಯಾಗಿದೆ. ಇದೇ ರೀತಿ 9 ಜಿಲ್ಲೆಗಳಿಗೆ ಕಂಚಿನ ಪದಕ ಲಭಿಸಿದೆ. ಒಟ್ಟು 14 ಜಿಲ್ಲೆಗಳಲ್ಲಿ ಕ್ಷಯ ನಿಯಂತ್ರಣದಲ್ಲಿ ಗಮನಾರ್ಹ ಸಾಧನೆಯಾಗಿರುವುದು ಶ್ಲಾಘನೀಯ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚು ಕ್ರಮ ಕೈಗೊಂಡು ಚಿನ್ನದ ಪದಕ ಪಡೆಯುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News