ಮೇಕೆದಾಟು ಯೋಜನೆ: ತಮಿಳುನಾಡು ನಿರ್ಣಯಕ್ಕೆ ವಿರುದ್ಧವಾಗಿ ಖಂಡನಾ ನಿರ್ಣಯ ಅಂಗೀಕರಿಸಿದ ಕರ್ನಾಟಕ
ಬೆಂಗಳೂರು, ಮಾ.24: ತಮಿಳುನಾಡು ರಾಜ್ಯಕ್ಕೆ ಯಾವುದೆ ಹಾನಿಯಾಗದ ಮೇಕೆದಾಟು ಯೋಜನೆಯನ್ನು ವಿರೋಧಿಸಿ ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನಿರ್ಣಯವನ್ನು ರಾಜ್ಯ ವಿಧಾನಸಭೆಯು ಸರ್ವಾನುಮತದಿಂದ ಖಂಡಿಸಿ ತಿದ್ದುಪಡಿ ಯೊಂದಿಗೆ ನಿರ್ಣಯ ಅಂಗೀಕರಿಸಿದೆ.
ಗುರುವಾರ ವಿಧಾನಸಭೆಯಲ್ಲಿ ಭೋಜನಾ ವಿರಾಮದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ನಿರ್ಣಯಕ್ಕೆ ತಿದ್ದುಪಡಿಯೊಂದಿಗೆ ಸರ್ವಾನುಮತದ ಅಂಗೀಕಾರ ಲಭ್ಯವಾಯಿತು.
ಮೇಕೆದಾಟು ಯೋಜನೆಗೆ ಈ ಕೂಡಲೆ ಅನುಮತಿ ನೀಡುವಂತೆ ಕೇಂದ್ರ ಜಲ ಆಯೋಗ ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯವನ್ನು ಒತ್ತಾಯಿಸುವುದು. ಕಣಿವೆ ರಾಜ್ಯಗಳ ನ್ಯಾಯಸಮ್ಮತ ಪಾಲನ್ನು ನಿರ್ಧರಿಸುವವರೆಗೆ ಗೋದಾವರಿ-ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ಜೋಡಣೆ ಯೋಜನೆಯ ಡಿಪಿಆರ್ ಅನ್ನು ಅಂತಿಮಗೊಳಿಸದಂತೆ ಹಾಗೂ ಡಿಪಿಆರ್‍ನ ಸಂಪೂರ್ಣ ಅಂಶಗಳ ಬಗ್ಗೆ ಕರ್ನಾಟಕದ ಒಪ್ಪಿಗೆ ಪಡೆದೆ ಅನುಮೋದನೆ ನೀಡಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಕರ್ನಾಟಕ ರಾಜ್ಯವು ಯೋಜಿಸಿರುವ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ವಿರೋಧಿಸಿ ಮಾ.21ರಂದು ತಮಿಳುನಾಡು ವಿಧಾನಸಭೆಯು ಸಭ್ಯವಲ್ಲದ ಭಾಷೆಯಲ್ಲಿ ಅಂಗೀಕರಿಸಿದ ಒಕ್ಕೂಟ ವಿರೋಧಿ ಮತ್ತು ಸಮರ್ಥನೀಯವಲ್ಲದ ನಿರ್ಣಯವನ್ನು ಮತ್ತು ತಮಿಳುನಾಡು ರಾಜ್ಯವು ತನ್ನ ಪ್ರಾದೇಶಿಕ ವ್ಯಾಪ್ತಿಯಲ್ಲಿ ಏಕಪಕ್ಷೀಯವಾಗಿ ಯೋಜಿಸಿರುವ ಕಾನೂನು ಬಾಹಿರ ಯೋಜನೆಗಳನ್ನು ಸಹ ಈ ಸದನವು ಗಣನೆಗೆ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುಪ್ರೀಂಕೋರ್ಟ್ ಕಾವೇರಿ ಜಲ ವಿವಾದ ನ್ಯಾಯಾಧೀಕರಣದ ತೀರ್ಪನ್ನು ಮಾರ್ಪಡಿಸಿ ಸಾಮಾನ್ಯ ಜಲ ವರ್ಷದಲ್ಲಿ ಬಿಳಿಗುಂಡ್ಲುವಿನಲ್ಲಿ 177.25 ಟಿಎಂಸಿ ನೀರಿನ ಪ್ರಮಾಣವನ್ನು ಖಚಿತಪಡಿಸುವಂತೆ ನಿಗದಿಪಡಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಸುಪ್ರೀಂಕೋರ್ಟ್ ಹಂಚಿಕೆ ಮಾಡಿರುವಂತೆ ಬೆಂಗಳೂರು ಮೆಟ್ರೋಪಾಲಿಟನ್ ನಗರದ ಕುಡಿಯುವ ನೀರಿನ ಅಗತ್ಯತೆಗೆ 24 ಟಿಎಂಸಿ(4.75 ಟಿಎಂಸಿ ಕುಡಿಯುವ ಬಳಕೆಗೆ) ನೀರನ್ನು ಸುಸ್ಥಿರಗೊಳಿಸಲು ಹಾಗೂ ತತ್ಪರಿಣಾಮವಾಗಿ ಜಲ ವಿದ್ಯುತ್ ಉತ್ಪಾದನೆಗೆ ಅಂತರ್-ರಾಜ್ಯ ನದಿ ಕಾವೇರಿಗೆ ಅಡ್ಡಲಾಗಿ ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ಯೋಜಿಸಲಾಗಿದೆ. ಈ ಯೋಜನೆಯಿಂದ ತಮಿಳುನಾಡು ರಾಜ್ಯಕ್ಕೆ ಯಾವುದೆ ಭಾದಕ ಅಥವಾ ಹಾನಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳೀದರು.
ಮೇಕೆದಾಟು ಕುಡಿಯುವ ನೀರು ಮತ್ತು ಸಮತೋಲನ ಜಲಾಶಯ ಯೋಜನೆಯನ್ನು ನಿರ್ಮಿಸಲು ಕರ್ನಾಟಕ ರಾಜ್ಯವು ತನ್ನ ಸಾಂವಿಧಾನಿಕ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಜಲ ನೀತಿಯೂ ಸಹ ಕುಡಿಯುವ ನೀರಿಗೆ ಪ್ರಥಮ ಆದ್ಯತೆಯನ್ನು ನೀಡುತ್ತದೆ. ಈ ಕುಡಿಯುವ ನೀರಿನ ಯೋಜನೆಯಿಂದ ನ್ಯಾಯಾಧೀಕರಣದ ಆದೇಶವನ್ನು ಯಾವುದೆ ರೀತಿಯಲ್ಲಿ ಉಲ್ಲಂಘಿಸುವುದಿಲ್ಲ ಎಂದು ಅವರು ತಿಳಿಸಿದರು.
ಕರ್ನಾಟಕದ ಪ್ರಾದೇಶಿಕ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಾವೇರಿ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಮೂಲಕ ತಮಿಳುನಾಡು ರಾಜ್ಯವು ಏಕಪಕ್ಷೀಯವಾಗಿ ಹಲವಾರು ಕಾನೂನು ಬಾಹಿರ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳಲ್ಲಿ ಕುಂದಾ ಪಿಎಸ್‍ಪಿ, ಸಿಲ್ಲಹಳ್ಳ ಪಿಎಸ್‍ಪಿ, ಹೊಗೇನಕಲ್ ಹಂತ-2, ಕಾವೇರಿ (ಕಟ್ಟಲೈ)-ವೈಗೈ-ಗುಂಡಾರ್ ಜೋಡಣೆ, ಇತ್ಯಾದಿಗಳು ಒಳಗೊಂಡಿವೆ ಎಂದು ಅವರು ಮಾಹಿತಿ ನೀಡಿದರು.
ಪೆನಿನ್ಸುಲರ್ ರಿವರ್ ಡೆವಲಪ್‍ಮೆಂಟ್ ಯೋಜನೆಯಡಿಯಲ್ಲಿ ಗೋದಾವರಿ ಹೆಚ್ಚುವರಿ ನೀರನ್ನು ಕೃಷ್ಣಾ-ಪೆನ್ನಾರ್-ಕಾವೇರಿ-ವೈಗೈ-ಗುಂಡಾರ್ ಯೋಜನೆಗೆ ತಿರುವುಗೊಳಿಸುವ ವಿಸ್ತøತಾ ಯೋಜನಾ ವರದಿಯನ್ನು ಕರ್ನಾಟಕ ರಾಜ್ಯವು ಸೇರಿದಂತೆ ಕಣಿವೆ ರಾಜ್ಯಗಳ ನೀರಿನ ಪಾಲನ್ನು ನಿರ್ಧರಿಸುವವರೆಗೆ ಅನುಮೋದಿಸಕೂಡದು ಎಂದು ಮುಖ್ಯಮಂತ್ರಿ ಹೇಳಿದರು.
ತಮಿಳುನಾಡು ರಾಜ್ಯವು, ಕರ್ನಾಟಕ ರಾಜ್ಯದ ಮೇಕೆದಾಟು ಯೋಜನೆಗೆ ತನ್ನ ಒಪ್ಪಿಗೆಯನ್ನು ಪಡೆಯಬೇಕೆಂದು ಕೋರಿದೆ. ಆದರೆ, ಅದೇ ಸಮಯದಲ್ಲಿ ತಮಿಳುನಾಡು ರಾಜ್ಯವು ಕರ್ನಾಟಕ ರಾಜ್ಯದ ಒಪ್ಪಿಗೆಯನ್ನು ಕೋರದೆ ಏಕಪಕ್ಷೀಯವಾಗಿ ಕಾನೂನು ಬಾಹಿರ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತನ್ನ ದ್ವಂದ್ವ ನಿಲುವನ್ನು ಪ್ರದರ್ಶಿಸುತ್ತಿದೆ. ತಮಿಳುನಾಡಿನ ಕಾನೂನು ಬಾಹಿರ ಯೋಜನೆಗಳನ್ನು ನಾವು ಬಲವಾಗಿ ಖಂಡಿಸುತ್ತಾ, ಎಲ್ಲ ವೇದಿಕೆಗಳಲ್ಲಿ ಅವುಗಳನ್ನು ವಿರೋಧಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಕೇಂದ್ರ ಜಲ ಆಯೋಗವು ಮೇಕೆದಾಟು ಯೋಜನೆ ವಿಸ್ತøತಾ ಯೋಜನಾ ವರದಿಯನ್ನು ಅನುಮೋದಿಸುವಂತೆ ಹಾಗೂ ಪರಿಸರ ಮತ್ತು ಅರಣ್ಯ ಮಂತ್ರಾಲಯವು ಯೋಜನೆಗೆ ಪರಿಸರ ಅನುಮತಿಯನ್ನು ಪಡೆಯಲು ಟಿಓಆರ್ ಅನ್ನು ಅನುಮೋದಿಸುವಂತೆ ಈ ಸದನವು ಸರ್ವಾನುಮತದಿಂದ ಒತ್ತಾಯಿಸುತ್ತದೆ ಎಂದು ಅವರು ತಮ್ಮ ನಿರ್ಣಯ ಮಂಡನೆ ಮಾಡಿದರು. ಇದಕ್ಕೆ ಸದನದಲ್ಲಿ ತಿದ್ದುಪಡಿಯೊಂದಿಗೆ ಸರ್ವಾನುಮತದ ಒಪ್ಪಿಗೆ ಲಭಿಸಿತು.