ಚಿಕ್ಕಮಗಳೂರು: ಕಂದಕಕ್ಕೆ ಉರುಳಿ ಬಿದ್ದ ಬಸ್; ಹಲವರಿಗೆ ಗಾಯ
ಚಿಕ್ಕಮಗಳೂರು: ಬಾಬಾ ಬುಡಾನ್ ದರ್ಗಾ ಸಮೀಪ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ 40ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.
ಬಾಬಾ ಬುಡಾನ್ ದರ್ಗಾದಿಂದ ಚಿಕ್ಕಮಗಳೂರು ಕಡೆಗೆ ಬರುತ್ತಿ ದ್ದಾಗ ಘಟನೆ ಸಂಭವಿಸಿದ್ದು, ದರ್ಗಾಕ್ಕೆ ತೆರಳಿದ್ದ 7ಜನರು ಬಸ್‍ನಲ್ಲಿ ಪ್ರಯಾಣಿಸು ತ್ತಿದ್ದರು. ಇವರಲ್ಲಿ ಓರ್ವ ವೃದ್ಧೆಯ ಸ್ಥಿತಿ ಗಂಭೀರವಾಗಿದ್ದು ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೂರು ವರ್ಷದ ಹೆಣ್ಣು ಮಗು ಅಪಾಯದಿಂದ ಪಾರಾಗಿದ್ದಾಳೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ರಶೀದಾ(45), ಜರೀನಾ ಬಾನು(50), ಬೇಗಂಬಿ(74), ಶಾಯಿನಾಬಾನು(23), ಸಾಧಿಕಾ ಶೇಖ್(5), ಸಾಧೀಕ್(23), ಸೈದಾಬಾನು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಬೇಗಂಬಿ ಮತ್ತು ಶಾಯಿನಾ ಬಾನು ಹುಬ್ಬಳ್ಳಿ ಮೂಲದವರು ಹಾಗೂ ರಶೀದಾಬಾನು ಚಿಕ್ಕಮಗ ಳೂರು ತಾಲ್ಲೂಕು ಅತ್ತಿಗುಂಡಿಯವರಾಗಿದ್ದು ಉಳಿದವರ ಬಗ್ಗೆ ತಿಳಿದು ಬರಬೇಕಿದೆ. ಗಾಯಗೊಂಡವರನ್ನು ಚಿಕ್ಕಮಗಳೂರು ನಗರದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾ ಖಲಿಸಲಾಗಿದೆ.
ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಸಮೀಪದಲ್ಲಿ ತಗ್ಗು ಪ್ರದೇಶದಲ್ಲಿ ಬಸ್ ನಿಲ್ಲಿಸಲಾಗಿತ್ತು. ಬಸ್ ಹೊರಡುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಸುಮಾರು 40 ಅಡಿ ಆಳಕ್ಕೆ ಬಸ್ ಉರುಳಿದೆ. ಸಂಜೆ ವೇಳೆ ಮಳೆಯೊಂದಿಗೆ ಮಂಜು ಕವಿದ ವಾ ತವರಣವಿದ್ದರಿಂದ ಘಟನೆ ಸಂಭವಿಸಲು ಕಾರಣ ಎನ್ನಲಾಗುತ್ತಿದೆ.
ತಕ್ಷಣ ಸ್ಥಳೀಯರು ಅಂಬ್ಯುಲೆನ್ಸ್‍ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಬಸ್‍ನಲ್ಲಿ ಕಡಿಮೆ ಪ್ರಯಾಣಿಕರಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ, ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತೆ ಆವರಣದಲ್ಲಿ ಜನರು ಧಾವಿಸಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಎಸ್‍ಪಿ ಶೃತಿ, ಗ್ರಾಮಾಂತರ ಮತ್ತು ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿನೀಡಿ ಘಟನೆ ಸಂಬಂಧ ಪರಿಶೀಲನೆ ನಡೆಸಿದರು.