ನಿಷೇಧಾಜ್ಞೆ ಇದ್ದರೂ ಕೇಂದ್ರ ಸಚಿವರು, ಶಾಸಕರು ಮೆರವಣಿಗೆ ಮಾಡಿದ್ದು ಏಕೆ: ಶಾಸಕ ಝಮೀರ್ ಅಹ್ಮದ್ ಖಾನ್ ಪ್ರಶ್ನೆ

Update: 2022-03-24 16:34 GMT

ಬೆಂಗಳೂರು, ಮಾ.24: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಫೆ.27ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ, ದರ್ಗಾ ಬಳಿಯಿರುವ ಶಿವಲಿಂಗದ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ, ಮಾ.1ರಂದು ಶಿವರಾತ್ರಿಯಂದು ಅಲ್ಲಿ ಪೂಜೆಯೂ ನೆರವೇರಿಸಲಾಗಿದೆ. ಆನಂತರವೂ ಕೇಂದ್ರ ಸಚಿವರು, ಬಿಜೆಪಿ ಶಾಸಕರು ಮೆರವಣಿಗೆ ನಡೆಸಿದ್ದು ಏಕೆ? ಎಂದು ಕಾಂಗ್ರೆಸ್ ಸದಸ್ಯ ಝಮೀರ್ ಅಹ್ಮದ್ ಖಾನ್ ಪ್ರಶ್ನಿಸಿದರು.

ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ವಿದ್ಯಾಮಾನಗಳಿಂದ ಕುಸಿದು ಬೀಳುತ್ತಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ನಿಯಮ 69ರ ಮೇರೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಅವರು ಮಾತನಾಡಿದರು.
ಶಾಸಕರು, ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖಂಡರು ನಿಷೇಧಾಜ್ಞೆ ಇದ್ದರೂ ಮೆರವಣಿಗೆಯಲ್ಲಿ ಬಂದಿದ್ದರಿಂದ ಅಲ್ಲಿ ಗಲಾಟೆಯಾಗಿದೆ. ಆ ದರ್ಗಾ ನಿನ್ನೆ ಮೊನ್ನೆಯದಲ್ಲ ಸುಮಾರು 600 ವರ್ಷಗಳಿಂದ ಆ ದರ್ಗಾ ಅಲ್ಲಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿವರಾತ್ರಿಯಂದು ಆ ದರ್ಗಾದ ಆವರಣದಲ್ಲಿರುವ ಶಿವಲಿಂಗ ಪೂಜೆಗೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಅದರಂತೆ, 10 ಜನ ಹಿಂದೂ ಹಾಗೂ 10 ಮುಸ್ಲಿಮರು ಬಂದು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿತ್ತು. ಕೇಂದ್ರ ಸಚಿವರನ್ನು ಜಿಲ್ಲಾಡಳಿತವೆ ಕರೆದುಕೊಂಡು ಅಲ್ಲಿಗೆ ಹೋಗಿದೆ ಎಂದರು.

ಈ ಸಂದರ್ಭದಲ್ಲಿ ಸುಮಾರು 2 ಸಾವಿರ ಜನ ಅಲ್ಲಿ ಸೇರಿದ್ದಾರೆ. ತಲವಾರು, ಖಾರದಪುಡಿ, ಕಲ್ಲುಗಳು ಎಲ್ಲವೂ ಬಂದಿದೆ. ಒಬ್ಬ ಕೇಂದ್ರ ಸಚಿವ ಆ ಸ್ಥಳದಿಂದ ಬದುಕಿ ಬಂದದ್ದೆ ಹೆಚ್ಚು ಎಂದು ಆರಗ ಜ್ಞಾನೇಂದ್ರ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, 1967ರಿಂದಲೂ ಪ್ರತಿವರ್ಷ ಶಿವರಾತ್ರಿಯಂದು ಶಿವಲಿಂಗಕ್ಕೆ ಪೂಜೆ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಅಲ್ಲಿ ಷಡ್ಯಂತ್ರ ನಡೆದಿದೆ. ಅನ್ಯ ಕ್ಷೇತ್ರದ ಶಾಸಕರು ಯಾಕೆ ಅಂದು ಬಂದದ್ದು, 144 ಸೆಕ್ಷನ್ ಜಾರಿಯಲ್ಲಿದ್ದರೂ ಕೇಂದ್ರ ಸಚಿವರು ಅಲ್ಲಿಗೆ ಬಂದದ್ದು ಯಾಕೆ? ಗೃಹ ಸಚಿವರು ಹೇಳುವಂತೆ ಕೇಂದ್ರ ಸಚಿವರು ಬದುಕಿ ಬಂದದ್ದೆ ಹೆಚ್ಚು ಎಂದರೆ, ಸರಕಾರ ತನ್ನ ವೈಫಲ್ಯವನ್ನು ಒಪ್ಪಿಕೊಂಡಂತೆ ಆಗಿದೆ ಎಂದರು.

ಈ ನಡುವೆ ಮಧ್ಯಪ್ರವೇಶಿಸಿದ ಝಮೀರ್ ಅಹ್ಮದ್ ಖಾನ್, ತಪ್ಪು ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಿ. ಯಾರು ಬೇಡ ಅಂದದ್ದು. ಅದೇ ರೀತಿ, 144 ಸೆಕ್ಷನ್ ಉಲ್ಲಂಘನೆ ಮಾಡಿರುವ ಜನಪ್ರತಿನಿಧಿಗಳ ವಿರುದ್ಧವು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News