ಪರಿಹಾರ ವಿತರಣೆಯಲ್ಲಿ ತಾರತಮ್ಯ ಯಾಕೆ: ಸಿದ್ದರಾಮಯ್ಯ ಪ್ರಶ್ನೆ

Update: 2022-03-25 06:35 GMT

ಬೆಂಗಳೂರು, ಮಾ.24: ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನಿಗೆ ಸರಕಾರ 25 ಲಕ್ಷ ರೂ.ಪರಿಹಾರ ನೀಡಿದೆ. ಅದಕ್ಕೆ ತಮ್ಮ ತಕರಾರಿಲ್ಲ. ಆದರೆ, ಇದೇ ಮಾನದಂಡ ಬೇರೆಯವರಿಗೂ ಅನ್ವಯವಾಗಬೇಕಲ್ಲ. ಬೆಳ್ತಂಗಡಿಯಲ್ಲಿ ಕೊಲೆಯಾದ ಎಸ್ಟಿ ಸಮುದಾಯದ ಯುವಕ ದಿನೇಶ್‍ಗೆ ಕೇವಲ 4 ಲಕ್ಷ ರೂ.ಪರಿಹಾರ ನೀಡಿದ್ದಾರೆ. ಯಾಕೆ ಈ ತಾರತಮ್ಯ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದರು.

ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ವಿದ್ಯಮಾನಗಳಿಂದ ಕುಸಿದು ಬೀಳುತ್ತಿರುವ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಗುರುವಾರ ವಿಧಾನಸಭೆಯಲ್ಲಿ ನಿಯಮ 69ರಡಿ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿದರು.

ದಿನೇಶ್ ಬಜರಂಗದಳದವರಿಂದ ಕೊಲೆಯಾದ ಎಂದು ಪರಿಹಾರ ಕೊಡಲಿಲ್ಲವೇ? ದಲಿತ ಅಂತ ಕೊಡಲಿಲ್ಲವೇ? ಕಾಂಗ್ರೆಸ್‍ನವರು ಎಂದು ಕೊಡಲಿಲ್ಲವೇ? ಬಿಜೆಪಿ ಅಥವಾ ಬಜರಂಗದಳ ಸೇರಲಿಲ್ಲ ಎಂದು ಕೊಡಲಿಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಅದೇ ರೀತಿ, ನರಗುಂದದಲ್ಲಿ ಜ.17ರಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಹತ್ಯೆಗೀಡಾದ ಸಮೀರ್ ಸುಭಾನ್(20) ಅವರಿಗೆ ಈವರೆಗೆ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಈ ಹತ್ಯೆಗೆ ಕಾರಣಕರ್ತರಾದವರ ವಿರುದ್ಧ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೊಡಗಿನ ವಿರಾಜಪೇಟೆಯ ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ ಅವರಿಗೆ ಈವರೆಗೆ ಪರಿಹಾರ ನೀಡಿಲ್ಲ. ನಮ್ಮ ಸರಕಾರದ ಅವಧಿಯಲ್ಲಿ ಯಾರೆ ಸೈನಿಕರು ಹುತಾತ್ಮರಾದರೂ 25 ಲಕ್ಷ ರೂ.ಪರಿಹಾರ ನೀಡಲಾಗುತ್ತಿತ್ತು. ಆದುದರಿಂದ, ಸರಕಾರ ದಿನೇಶ್, ಸಮೀರ್ ಸುಭಾನ್ ಹಾಗೂ ಅಲ್ತಾಫ್ ಅಹ್ಮದ್ ಅವರಿಗೂ 25 ಲಕ್ಷ ರೂ.ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

‘ಹೆಣ್ಣು ಮಕ್ಕಳಿಗೆ ದುಪಟ್ಟಾ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಿ’

ನಿನ್ನೆ ನಾನು ಹಾಗೂ ನಮ್ಮ ಶಾಸಕರು ಮುಸ್ಲಿಮ್ ಧರ್ಮ ಗುರುಗಳನ್ನು ಭೇಟಿಯಾದೆವು. ಹಿಜಾಬ್ ಬದಲಾಗಿ ಸಮವಸ್ತ್ರದಲ್ಲಿರುವ ದುಪಟ್ಟಾವನ್ನು ತಲೆ ಮೇಲೆ ಹಾಕಿಕೊಂಡು ಪರೀಕ್ಷೆ ಬರೆಯಲು ಹೆಣ್ಣು ಮಕ್ಕಳಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಪರೀಕ್ಷಾ ಕೇಂದ್ರಗಳು ಬೇರೆ ಬೇರೆ ಕಡೆಯಿರುತ್ತದೆ. ಆದುದರಿಂದ, ಹೆಣ್ಣು ಮಕ್ಕಳಿಗೆ ತೊಂದರೆಯಾಗಬಾರದು. ಶಿಕ್ಷಣ ಮೂಲಭೂತ ಹಕ್ಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ಸಿಗದಿದ್ದರೆ ಸಮಾಜಕ್ಕೆ ನಷ್ಟ. ಸಮುದಾಯದ ಮುಖಂಡರ ಕರೆದು ಸಭೆ ಮಾಡಿ, ಸಮಾಜದ ಹಿತದೃಷ್ಟಿಯಿಂದ ನ್ಯಾಯಾಲಯದ ಹೊರಗಡೆ ಸಮಸ್ಯೆ ಬಗೆಹರಿಸಬಹುದು ಎಂದು ಸರಕಾರಕ್ಕೆ ಸಲಹೆ ನೀಡುತ್ತೇನೆ.

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News