ವಾಹನ ತಂತ್ರಜ್ಞರ ಕುರಿತು ಅವಹೇಳನ ಆರೋಪ: ಸಂಸದ ಮುನಿಸ್ವಾಮಿ ರಾಜೀನಾಮೆಗೆ ಆಗ್ರಹ
ಬೆಂಗಳೂರು, ಮಾ.23: ವಾಹನ ತಂತ್ರಜ್ಞರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಕೋಲಾರ ಸಂಸದ ಎಸ್. ಮುನಿಸ್ವಾಮಿ ಅವರು ಕೂಡಲೇ ಕ್ಷಮೆ ಯಾಚಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹಾಗೆಯೇ, ಹೇಳಿಕೆ ವಿರುದ್ಧ ಸರಕಾರ ಕನೂನುಕ್ರಮ ಕೈಗೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗುವುದು ಎಂದು ಕರ್ನಾಟಕದ ದ್ವಿಚಕ್ರವಾಹನ ಕಾರ್ಯಾಗಾರ ಮಾಲಕರು ಮತ್ತು ತಂತ್ರಜ್ಞರ ಸಂಘದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಗೌಡ ಸಂಸದರಿಗೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರದಂದು ಮಾತನಾಡಿದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಗೌಡ, ಕೋಲಾರ ಜಿಲ್ಲೆಯ ಸಂಸದರಾದ ಮುನಿಸ್ವಾಮಿ ಅವರು ಇತ್ತೀಚಿಗೆ ಮುಳಬಾಗಲು ಪಟ್ಟಣದಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ `ಯಾರು ಪಂಚರ್ ಅಂಗಡಿಗಳು ಇಟ್ಟುಕೊಂಡು, ಯಾರ್ಯಾರು ವರ್ಕ್ ಶ್ಯಾಪ್‍ಗಳು, ಚಿಕನ್ ಅಂಗಡಿ ಇಟ್ಟುಕೊಂಡಿದ್ದೀರೊ ಅವರು ತಂದೆ-ತಾಯಿಗಳಿಗೆ ಊಟ ಹಾಕುವ ಯೋಗ್ಯತೆ ಇಲ್ಲದವರು, ನೀವು ಓದಿಲ್ಲ ಹೆಬ್ಬೆಟ್ಟುಗಳು, ನಿಮಗೆ ನಾವು ಕೇರ್ ಮಾಡಲ್ಲ. ನಾವು ಮನಸ್ಸು ಮಾಡಿದರೆ ನಿಮ್ಮ ಬಿಜಿನೆಸ್ ನಡೆಯಲ್ಲ, ದುಕಾನ್ ಬಂದ್’ ಎಂದು ಕೀಳುಮಟ್ಟದಲ್ಲಿ ನಿಂದಿಸಿದ್ದರು. ಇದರಿಂದಾಗಿ ಸಮಾಜದಲ್ಲಿ ದುಡಿದು ಘನತೆಯಿಂದ ಬದುಕುತ್ತಿರುವ ನಮಗೆ ಅತೀವ ನೋವು ಸಂಕಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಾಹನ ತಂತ್ರಜ್ಞರಾದ ನಾವು ನ್ಯಾಯದ ಹಾದಿಯಲ್ಲಿ ದುಡಿಯುತ್ತಿದ್ದು, ಸಮಾಜದಲ್ಲಿ ಯಾರಿಗೂ ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ. ನಾವು ನಮ್ಮ ತಂದೆ ತಾಯಿಗಳನ್ನು, ನಮ್ಮ ಇಡೀ ಕುಟುಂಬವನ್ನು ನೋಡಿಕೊಳ್ಳುವ ಶಕ್ತಿವುಳ್ಳವರಾಗಿದ್ದು, ಶ್ರಮಿಕ ವರ್ಗವನ್ನು ವಿರೋಧಿಸುತ್ತಿರುವ ಕೋಲಾರ ಸಂಸದರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಂಸದರ ಹೇಳಿಕೆಯನ್ನು ಖಂಡಿಸಿದ ಅವರು, ಸಂಸದರ ದುರ್ವರ್ತನೆಯಿಂದ ಸಾಮಾನ್ಯ ಜನರು ವಾಹನ ತಂತ್ರಜ್ಞರನ್ನು ಕೀಳಾಗಿ ನೋಡುವ ಸಾಧ್ಯತೆ ಇರುತ್ತದೆ, ರಾಜಕೀಯದ ಕಿತ್ತಾಟಗಳಿಗೆ ಸಂಸದರು ಮೆಕ್ಯಾನಿಕ್‍ಗಳ ಹೆಸರು ಹೇಳುತ್ತಿರುವುದನ್ನು ಸಹಿಸುವುದು ಸಾಧ್ಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭಾಸ್ಕರ್, ಜಗದೀಶ್, ರಘುನಾಥ್, ನಾರಾಯಣ್, ವಿನೋದ್ ಮುಂತಾದವರು ಉಪಸ್ಥಿತರಿದ್ದರು.