ಹೊಸದಾಗಿ 500 ಆಂಬ್ಯುಲೆನ್ಸ್ ಖರೀದಿ: ಸಚಿವ ಡಾ.ಸುಧಾಕರ್

Update: 2022-03-24 17:20 GMT

ಬೆಂಗಳೂರು, ಮಾ. 24: ‘ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸೇವೆಯನ್ನು ಮತ್ತಷ್ಟು ಉತ್ಕøಷ್ಟ ದರ್ಜೆ ಸೇವೆಯನ್ನಾಗಿ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ 500 ಆಂಬ್ಯುಲೆನ್ಸ್‍ಗಳನ್ನು ಖರೀದಿಸಲಾಗುತ್ತಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಕೃಷ್ಣಬೈರೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಆರೋಗ್ಯ ತುರ್ತು ಸೇವೆಗಾಗಿ 2008ರಲ್ಲಿ ಆರೋಗ್ಯ ಕವಚ-108 ಆಂಬ್ಯುಲೆನ್ಸ್ ಯೋಜನೆಯನ್ನು ಇಡೀ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಆರಂಭಿಸಲಾಗಿತ್ತು. ಆಗ ಜಿವಿಕೆ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು ಆರೋಗ್ಯ ಕವಚ ಸೇವೆಯ ನಿರ್ವಹಣೆಯನ್ನು ವಹಿಸಲಾಗಿತ್ತು.

ಆರಂಭದಲ್ಲಿ ಸಂಸ್ಥೆಯವರು ಉತ್ತಮವಾಗಿ ಸೇವೆ ಒದಗಿಸಿದರಾದರೂ ನಂತರ ಆರ್ಥಿಕ ಸಮಸ್ಯೆಯಿಂದ ನಿರೀಕ್ಷೆಗೆ ತಕ್ಕಂತೆ ಸೇವೆ ಒದಗಿಸಲಿಲ್ಲ. ನಂತರ 2017ರಲ್ಲಿ ಆಗಿನ ಸರಕಾರ ಈ ಸಂಸ್ಥೆ ಜತೆಗಿನ ಒಪ್ಪಂದವನ್ನು ರದ್ದು ಮಾಡಿ ಹೊಸ ಟೆಂಡರ್ ಕರೆಯಲು ಮುಂದಾಗಿತ್ತು. ಆಗ ಸಂಸ್ಥೆಯವರು ಕೋರ್ಟ್‍ಗೆ ತೆರಳಿ ಮೂರ್ನಾಲ್ಕು ಬಾರಿ ಒಪ್ಪಂದವನ್ನು ವಿಸ್ತರಿಸಿಕೊಂಡಿದ್ದಾರೆ.

ಆರೋಗ್ಯ ಕವಚ-108 ಯೋಜನೆಯಡಿ 750 ಆಂಬ್ಯುಲೆನ್ಸ್‍ಗಳ ಅಗತ್ಯವಿದ್ದರೂ 500 ಆಂಬ್ಯುಲೆನ್ಸ್‍ಗಳು ಮಾತ್ರ ಕೆಲಸ ಮಾಡುತ್ತಿದ್ದರಿಂದ ರೋಗಿಗಳಿಗೆ ವಿಳಂಬವಾಗಿ ಆಂಬ್ಯುಲೆನ್ಸ್ ಸೇವೆ ಲಭ್ಯವಾಗುತ್ತಿತ್ತು. ಹೀಗಾಗಿ ಇದನ್ನೆಲ್ಲಾ ಸರಿಪಡಿಸಿ ಸಕಾಲದಲ್ಲಿ ಆಂಬ್ಯುಲೆನ್ಸ್ ಸೇವೆ ಒದಗಿಸಲು ವಿನೂತನ ಯೋಜನೆಯನ್ನು ಸರಕಾರ ಶೀಘ್ರದಲ್ಲೇ ಜಾರಿ ಮಾಡುತ್ತಿದ್ದು ಹೊಸದಾಗಿ 500 ಆಂಬ್ಯುಲೆನ್ಸ್‍ಗಳನ್ನು ಖರೀದಿ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಸುಧಾಕರ್ ತಿಳಿಸಿದರು.

‘ಹೊಸ ಆಂಬ್ಯುಲೆನ್ಸ್‍ಗಳ ಖರೀದಿ ಹಾಗೂ ಹೊಸ ಯೋಜನೆ ಜಾರಿ ನಂತರ ಆಂಬ್ಯುಲೆನ್ಸ್ ವಿಳಂಬ ಸಮಸ್ಯೆಗಳು ಬಗೆಹರಿಯಲಿವೆ. 108 ಆರೋಗ್ಯ ಕವಚ ಯೋಜನೆಯನ್ನು ಉತ್ಕøಷ್ಟ ಯೋಜನೆಯನ್ನಾಗಿ ಮಾಡಲು ಕ್ರಮ ವಹಿಸಲಾಗುವುದು. ವಿಶ್ವ ಆರೋಗ್ಯ ಸಂಸ್ಥೆ ಮಾನದಂಡದ ಮೇಲೆ ಈ ಯೋಜನೆಯನ್ನು ರೂಪಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಆಂಬ್ಯುಲೆನ್ಸ್ ವಿಳಂಬ ಸಮಸ್ಯೆಗಳು ಬಗೆಹರಿಯುತ್ತವೆ. ಈಗ ಆಂಬ್ಯುಲೆನ್ಸ್ ವಿಳಂಬ ಸಮಸ್ಯೆಗೆ ಸರಕಾರ ಕಾರಣವಲ್ಲ. ಸೇವೆ ಒದಗಿಸಲು ಟೆಂಡರ್ ಪಡೆದಿರುವ ಸೇವಾದಾರರಿಂದ ಈ ಸಮಸ್ಯೆಗಳಾಗುತ್ತಿದೆ. ಅದನ್ನು ಸರಕಾರ ಶೀಘ್ರದಲ್ಲೆ ಸರಿಪಡಿಸಿ ಉತ್ತಮ ಸೇವೆಯನ್ನು ಒದಗಿಸಲಿದೆ' ಎಂದು ಸುಧಾಕರ್ ಭರವಸೆ ನೀಡಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಕೃಷ್ಣಬೈರೇಗೌಡ, ‘ಆಂಬ್ಯುಲೆನ್ಸ್ ವಿಳಂಬ ಸಮಸ್ಯೆಯಿಂದ ರಾಜ್ಯದಲ್ಲಿ ಆಗುತ್ತಿರುವ ತೊಂದರೆಗಳು, ಒಂದೆರಡಲ್ಲ. ಹೃದಯಾಘಾತ, ಪಾಶ್ರ್ವವಾಯು ಪೀಡಿತ ರೋಗಿಗಳಿಗೆ ಸಕಾಲದಲ್ಲಿ ಆಂಬ್ಯುಲೆನ್ಸ್ ದೊರೆಯದೆ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿಎಜಿ ವರದಿ ಮಾಡಿದೆ. ಆದರೆ, ಸರಕಾರ ಸೇವೆಯಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ದೂರಿದರು.

‘ಕನಿಷ್ಠ 30 ನಿಮಿಷದ ಒಳಗೆ ಆಂಬ್ಯುಲೆನ್ಸ್ ಸೇವೆ ಒದಗಿಸಲಾಗುತ್ತಿದೆ ಎಂದು ಸರಕಾರ ಹೇಳುತ್ತಿದೆ. ಆದರೆ, ರಾಯಚೂರಿನಲ್ಲಿ ರೋಗಿಯೊಬ್ಬರು ರಾತ್ರಿ 1:30ರ ಸುಮಾರಿಗೆ ಕರೆ ಮಾಡಿದರೆ 80 ನಿಮಿಷಗಳಷ್ಟು ವಿಳಂಬ ಮಾಡಿ ಆಂಬ್ಯುಲೆನ್ಸ್ ಬಂದಿದೆ. ಈ ಸಮಸ್ಯೆ ಗಂಭೀರತೆಯೇ ಸರಕಾರಕ್ಕೆ ಅರ್ಥ ಆಗುತ್ತಿಲ್ಲ. ಶೇ.50ರಷ್ಟು ಪ್ರಕರಣಗಳಲ್ಲಿ ಆಂಬ್ಯುಲೆನ್ಸ್ ಸೇವೆ ಸಿಗುತ್ತಿಲ್ಲ ಎಂದು ಸಿಎಜಿ ವರದಿ ನೀಡಿದೆ' ಎಂದು ಕೃಷ್ಣಬೈರೇಗೌಡ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News