×
Ad

ಡಾ.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ 371 ‘ಜೆ' ಅಡಿಯಲ್ಲಿ ಮೀಸಲಾತಿ: ಸಚಿವ ಡಾ.ಅಶ್ವತ್ಥ ನಾರಾಯಣ

Update: 2022-03-24 23:01 IST

ಬೆಂಗಳೂರು, ಮಾ. 24: ‘ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ರಾಜ್ಯ ವಿದ್ಯಾರ್ಥಿಗಳ ಕೋಟಾದ ಅಡಿಯ ಸೀಟುಗಳ ಪೈಕಿ ಶೇ.8 ರಷ್ಟು ಸೀಟುಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಅಮರೇಗೌಡ ಬಯ್ಯಾಪುರ್ ಪರವಾಗಿ ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ ಆದೇಶ ಮತ್ತು ಭಾರತೀಯ ಸಂವಿಧಾನದ ಅನುಚ್ಛೇದ 371ಜೆ ಅನ್ವಯ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಶೇ.8 ರಷ್ಟು ಸೀಟುಗಳನ್ನು ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮೀಸಲಿಡಲಾಗುತ್ತಿದೆ' ಎಂದು ಸಷ್ಟಪಡಿಸಿದರು.

‘2017-18ನೆ ಸಾಲಿನಲ್ಲಿ ಆರಂಭಿಸಲಾಗಿದ್ದ ಬಿಎಸ್ಸಿ ಕೋರ್ಸ್‍ಗಳನ್ನು 2018-19ನೆ ಸಾಲಿನಿಂದ 5 ವರ್ಷಗಳ ಇಂಟಿಗ್ರೇಟೆಡ್ ಎಂಎಸ್ಸಿ ಎಕನಾಮಿಕ್ಸ್ ಕೋರ್ಸ್ ಆಗಿ ಪರಿವರ್ತಿಸಲಾಗಿದೆ. ಜತೆಗೆ 2020-21ನೆ ಸಾಲಿನಿಂದ 2 ವರ್ಷಗಳ ಎಂಎಸ್ಸಿ ಎಕಾನಾಮಿಕ್ಸ್ ಕೋರ್ಸ್ ಆರಂಭಿಸಲಾಗಿದೆ' ಎಂದು ಡಾ.ಅಶ್ವತ್ಥ ನಾರಾಯಣ ಇದೇ ವೇಳೆ ಹೇಳಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ಶತಮಾನೋತ್ಸವದ ಅಂಗವಾಗಿ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಸಂಸ್ಥೆ ಸ್ಥಾಪಿಸಿದ್ದು, ಅತ್ಯಂತ ಮಹತ್ವದ ಸಂಸ್ಥೆ. ಈ ಸಂಸ್ಥೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದವರಿಗೆ ಮೀಸಲಾತಿ ಕಲ್ಪಿಸಬೇಕು' ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News