ಮಲೆನಾಡಿನಲ್ಲಿ ಅರಣ್ಯ ಯೋಜನೆಗಳಿಂದಾಗಿ ಬಡವರ ಬದುಕು ಬೀದಿಪಾಲಾಗುತ್ತಿದೆ: ಕಲ್ಕುಳಿ ವಿಠಲ್ ಹೆಗ್ಡೆ ಆಕ್ರೋಶ

Update: 2022-03-24 17:49 GMT

ಚಿಕ್ಕಮಗಳೂರು, ಮಾ.24: ಮಲೆನಾಡು ಭಾಗದಲ್ಲಿ ವಿವಿಧ ಅರಣ್ಯ ಯೋಜನೆಗಳಿಂದಾಗಿ ಸಾವಿರಾರು ಬಡ ಕುಟುಂಬಗಳು ನಿರಾಶ್ರಿತರಾಗಿದ್ದು, ಮಲೆನಾಡಿನ ಅಭಿವೃದ್ಧಿಗೆ ಮಾರಕವಾಗಿರುವ ಅರಣ್ಯ ಯೋಜನೆಗಳನ್ನು ಕೂಡಲೇ ರದ್ದುಪಡಿಸಿ ಬಡ ಜನರಿಗೆ ನಿವೇಶನ ಕಲ್ಪಿಸಿ, ಬದುಕಿಗಾಗಿ ಕೃಷಿ ಮಾಡಿರುವ ಜಮೀನುಗಳನ್ನು ಸಕ್ರಮಗೊಳಸಬೇಕು. ಅರಣ್ಯ ಇಲಾಖೆ ಬಡಜನರ ಮೇಲೆ ನಡೆಸುವ ದೌರ್ಜನ್ಯವನ್ನು ನಿಲ್ಲಿಸಬೇಕೆಂದು ಚಿಂತಕ ಹಾಗೂ ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಆಗ್ರಹಿಸಿದ್ದಾರೆ. 

ಬಡಜನರಿಗೆ ನಿವೇಶನ ಹಾಗೂ ಭೂಮಿ ಹಕ್ಕು ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಜನಶಕ್ತಿ ಸಂಘ ಜಿಲ್ಲೆಯ ಮಲೆನಾಡು ಭಾಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಬೈಕ್ ಜಾಥಾ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆ ಮಾಡುವ ಮೂಲಕ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಲೆನಾಡಿನ ಬಡಜನರು ಹಾಗೂ ಆದಿವಾಸಿಗಳಿಗೆ ಅರಣ್ಯ ಇಲಾಖೆಯ ಹೊಸ ಹೊಸ ಯೋಜನೆಗಳು ಮಾರಕವಾಗಿ ಪರಿಣಮಿಸುತ್ತಿವೆ. ವಿವಿಧ ಅರಣ್ಯ ಯೋಜನೆಗಳ ಹೆಸರಿನಲ್ಲಿ ಮಲೆನಾಡಿನಿಂದ ಬಡಜನರು, ಕಾರ್ಮಿಕರು ಹಾಗೂ ಆದಿವಾಸಿಗಳು, ದಲಿತರನ್ನು ಹೊರ ಹಾಕಲು ಸಂಚು ಮಾಡಲಾಗುತ್ತಿದೆ. ಕಸ್ತೂರಿ ರಂಗನ್ ವರದಿ, ಹುಲಿಯೋಜನೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಗಳಿಂದಾಗಿ ಸಾವಿರಾರು ಕುಟುಂಬಗಳು ಬೀದಿಪಾಲಾಗುತ್ತಿದ್ದು, ಇಂತಹ ಯೋಜನೆಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಜನತೆ ಅಣಿಯಾಗಬೇಕೆಂದು ಕರೆ ನೀಡಿದರು.

ಅರಣ್ಯ ಯೋಜನೆಗಳಿಂದಾಗಿ ಮಲೆನಾಡು ಭಾಗದಲ್ಲಿ ಬಡಜನರಿಗೆ ನಿವೇಶನಕ್ಕೂ ಜಾಗ ಸಿಗದಂತಾಗಿದೆ. ನಿವೇಶನಕ್ಕಾಗಿ 94ಸಿ, 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಸಾವಿರಾರು ಕುಟುಂಬಗಳ ಅರ್ಜಿಗಳು ವಿಲೇವಾರಿಯಾಗದೇ ಕಸದ ಬುಟ್ಟಿಗೆ ಸೇರುತ್ತಿವೆ. 30 ವರ್ಷಗಳಿಂದ ಬದುಕಿಗಾಗಿ 1-2 ಎಕರೆ ಜಮೀನು ಕೃಷಿ ಮಾಡಿರುವ ರೈತರು ಫಾರಂ 57ರಲ್ಲಿ ಜಮೀನು ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಬಡಜನರ ಜಮೀನು ಸಕ್ರಮ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಬೇಕಾದ ಜನಪ್ರನಿಧಿಗಳು, ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತ ಯಾವುದೇ ಕ್ರಮವಹಿಸದೇ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿದರು.

ಮಲೆನಾಡು ಭಾಗದ ಅರಣ್ಯ ಯೋಜನೆ ಹಾಗೂ ಅರಣ್ಯ ಕಾನೂನುಗಳ ಬಗ್ಗೆ ಜನರಿಗೆ ಸೂಕ್ತ ಅರಿವನ್ನು ನೀಡದೆ ಆದಿವಾಸಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಗಿರಿಜನರನ್ನು ಅಕ್ರಮವಾಗಿ ಒಕ್ಕಲೆಬ್ಬಿಸುತ್ತಿದ್ದಾರೆ, 2008ರಲ್ಲಿ ಫಾರಂ ನಂಬರ್ 53ರಲ್ಲಿ ಸಾಗುವಳಿ ಚೀಟಿ ನೀಡಿದ ಅಧಿಕಾರಿಗಳೇ ಫಲಾನುಭವಿಗಳ ಮೇಲೆ ಭೂ ಕಬಳಿಕೆ ಕೇಸ್ ದಾಖಲು ಮಾಡಿದ್ದಾರೆ. ಅನಗತ್ಯವಾಗಿ ಬಡವರು, ಸಣ್ಣ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದ ಅವರು, ಮಲೆನಾಡಿನಲ್ಲಿ ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆಗಳಿಗೆ ಕೂಡಲೇ ಕಡಿವಾಣ ಬೀಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯ ಎಂದರು.

ಕರ್ನಾಟಕ ಜನಶಕ್ತಿ ಸಂಘದ ರಾಜ್ಯ ಸಂಚಾಲಕ ಕೆ.ಎಲ್.ಅಶೋಕ್ ಮಾತನಾಡಿ, ಬಡವರಿಗೆ ನಿವೇಶನ, ಭೂಮಿ ಹಂಚಿಕೆ ಮಾಡುವಲ್ಲಿ ಇದುವರೆಗೂ ಆಡಳಿತ ನಡೆಸಿದ ಎಲ್ಲ ಸರಕಾರಗಳೂ ವಿಫಲವಾಗಿವೆ. ವಿವಿಧ ಅರಣ್ಯ ಯೋಜನೆಗಳ ಹೆಸರಿನಲ್ಲಿ ಬಡಜನರನ್ನು ಬೀದಿಪಾಲು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಡಜನರ ಭೂಮಿ, ನಿವೇಶನ ಹಕ್ಕಿಗಾಗಿ ಆಗ್ರಹಿಸಿ ಮಾ.24-25ರಂದು ಜಿಲ್ಲೆಯ 6 ತಾಲೂಕುಗಳ ವ್ಯಾಪ್ತಿಯಲ್ಲಿ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ. ಮಾ.28ರಂದು ಕೊಪ್ಪದಲ್ಲಿ ಈ ಸಂಬಂಧ ಜನಾಗ್ರಹ ಚಳವಳಿ ನಡೆಯಲಿದ್ದು, ಚಳವಳಿ ಮೂಲಕ ಜಿಲ್ಲಾಡಳಿತವನ್ನು ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಇದೇ ವೇಳೆ 4 ತಂಡಗಳಲ್ಲಿ ಹೊರಟ ಬೈಕ್ ಜಾಥಾ ಶೃಂಗೇರಿ ಸೇರಿದಂತೆ ಕೊಪ್ಪ, ಎನ್.ಆರ್.ಪುರ,ಕಳಸ ತಾಲೂಕು ವ್ಯಾಪ್ತಿಯ ಸುಮಾರು 60 ಹಳ್ಳಿಗಳಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಿದರು. ಈ ವೇಳೆ ಮುಖಂಡರಾದ ಗಿರಿಜನ ಮುಖಂಡ ಮರಿಯಪ್ಪ, ಕರ್ನಾಟಕ ಜನಶಕ್ತಿ ಸಂಘ ಹಾಗಲಗಂಚಿ ವೆಂಕಟೇಶ್, ಸುರೇಶ್ ಗಡಿಕಲ್, ಬಿಎಸ್ಪಿ ಮುಖಂಡ ಕೆ.ಎಂ.ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News