ರಾಜ್ಯದ ವಿವಿಧೆಡೆ ಬಿಸಿಲಿನ ಝಳಕ್ಕೆ ತಂಪೆರೆದ ಮಳೆ
ಬೆಂಗಳೂರು: ರಾಜ್ಯದ ವಿವಿಧೆಡೆ ಕಳೆದ ಕೆಲ ದಿನಗಳಿಂದ ಮಳೆ ಬಿದ್ದಿದ್ದು, ತೀವ್ರ ಗಾಳಿ ಮತ್ತು ಗುಡುಗು ಸಹಿತ ಮಳೆಯಿಂದಾಗಿ, ಬಿಸಿಲಿನ ಝಳ ಕಡಿಮೆಯಾಗಿದೆ.
ನವಲಗುಂದ ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ಕುರಿಗಾಹಿಗಳು ಮೃತಪಟ್ಟಿದ್ದಾರೆ. 15 ಕುರಿಗಳು ಸುಟ್ಟು ಕರಕಲಾಗಿವೆ. ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವ್ಯಾಪಕ ಮಳೆಯಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಕಳೆದ ಕೆಲ ವಾರಗಳಿಂದ ಏರುತ್ತಿದ್ದ ಉಷ್ಣಾಂಶ ಕಡಿಮೆಯಾಗಿದೆ. ದಿಢೀರ್ ಮಳೆಯಿಂದಾಗಿ, ಮನೆಗೆ ಮರಳುತ್ತಿದ್ದ ದಿನಗೂಲಿಗಳು ಮತ್ತು ಉದ್ಯೋಗಿಗಳು ತೊಂದರೆ ಅನುಭವಿಸುವಂತಾಯಿತು.
ಚನ್ನಗಿರಿ, ಸಂತೆಬೆನ್ನೂರು, ನ್ಯಾಮತಿ ಮತ್ತು ಮಾಯಕೊಂಡ ಸೇರಿದಂತೆ ದಾವಣಗೆರೆ ಜಿಲ್ಲೆಯ ವಿವಿಧೆಡೆಯೂ ಗುರುವಾರ ಸಂಜೆ ಸಾಧಾರಣ ಮಳೆಯಾಗಿದೆ. ಮರ ಮತ್ತು ವಿದ್ಯುತ್ ಕಂಬಗಳು ಉರುಳಿದ ಘಟನೆ ಹಾಸನ ನಗರದಿಂದ ವರದಿಯಾಗಿದ್ದು, ಬೇಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ರಾತ್ರಿಯಿಡೀ ಮಳೆಯಾಗಿದ್ದು, ಗಾಳಿಯ ತೀವ್ರತೆ ಹೆಚ್ಚಿದೆ. ಹಾಸನದಲ್ಲಿ ಮರ ಬಿದ್ದು, ಶಾಲೆಯೊಂದರ ಆವರಣ ಗೋಡೆಗೆ ಹಾನಿಯಾಗಿದೆ ಹಾಗೂ ತರಕಾರಿ ಅಂಗಡಿಯೊಂದು ಜಖಂಗೊಂಡಿದೆ.
ಈ ಋತುವಿನ ಮೊದಲ ಮಳೆ ಬೇಲೂರು ತಾಲೂಕಿನ ಕಾಫಿ ಬೆಳೆಗಾರರ ಮುಖದಲ್ಲಿ ನಗು ತಂದಿದೆ. ಆದರೆ ಶ್ರೀರಂಗಪಟ್ಟಣ ತಾಲೂಕಿನ ಬಾಳೆ ಬೆಳೆಗಾರರನ್ನು ಕಂಗೆಡಿಸಿದೆ. ನೀರಲಕೆರೆ ಗ್ರಾಮದಲ್ಲಿ ಬುಧವಾರ ರಾತ್ರಿ ಬಿದ್ದ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಸಿದ್ಧವಾಗಿದ್ದ ಶೇಕಡ 70ರಷ್ಟು ಬಾಳೆ ಬೆಳೆಗೆ ಹಾನಿಯಾಗಿದೆ ಎಂದು ಹೇಳಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸುಮಾರು 37 ಎಕರೆ ಬಾಳೆ ಬೆಳೆಗೆ ಹಾನಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಕಾಳುಮೆಣಸು ಬೆಳೆಗಾರರಿಗೆ ಅಕಾಲಿಕ ಮಳೆಯಿಂದ ವ್ಯಾಪಕ ಹಾನಿಯಾಗಿದೆ. ತುಮಕೂರು ಜಿಲ್ಲೆಯ ವಿವಿಧೆಡೆ ಗುರುವಾರ ಸಾಧಾರಣ ಮಳೆಯಾಗಿದೆ.