10ರಿಂದ 20 ಸಾವಿರ ಜನಸಂಖ್ಯೆಯುಳ್ಳ ಗ್ರಾ.ಪಂ.ಗಳನ್ನು ಪ.ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೆ: ಸಚಿವ ಎಂಟಿಬಿ ನಾಗರಾಜ್

Update: 2022-03-25 12:25 GMT
 ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು, ಮಾ. 25: ‘10 ಸಾವಿರದಿಂದ 20 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾ.ಪಂ.ಗಳನ್ನು ಪಟ್ಟಣ ಪಂಚಾಯ್ತಿಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಬಂಡೆಪ್ಪ ಕಾಶೆಂಪುರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಜನಸಂಖ್ಯೆ ಹೆಚ್ಚಿರುವ ಗ್ರಾ.ಪಂ.ಗಳನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆಗೆ ಬರಬೇಕು. ಪ್ರಸ್ತಾವನೆ ಬಂದರೆ ಕೂಡಲೇ ಅಧಿಸೂಚನೆ ಹೊರಡಿಸಿ ಮೇಲ್ದರ್ಜೆಗೇರಿಸಲಾಗುವುದು' ಎಂದು ಹೇಳಿದರು. 

‘ರಾಜ್ಯದ ಗ್ರಾ.ಪಂ.ಗಳನ್ನು ಈ ರೀತಿ ಮೇಲ್ದರ್ಜೆಗೇರಿಸಲು ಜೂ.30ರವರೆಗೂ ಅವಕಾಶವಿದೆ. ಬೀದರ್ ಜಿಲ್ಲಾಧಿಕಾರಿಗಳು ಪೌರಾಡಳಿತ ನಿರ್ದೇಶನಾಲಯಕ್ಕೆ ಅಗತ್ಯ ದಾಖಲೆ ಸಲ್ಲಿಸಿದ್ದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಬೀದರ್ ತಾಲೂಕಿನ ಕಮಠಾಣಾ ಮತ್ತು ಚಿಟಗುಪ್ಪ ತಾಲೂಕಿನ ಮುನ್ನಎಖ್ಖೇಳ್ಳಿ ಗ್ರಾ.ಪಂ.ಗಳು ಪಟ್ಟಣ ಪಂಚಾಯ್ತಿಯಾಗಿ ಪರಿವರ್ತನೆ ಹೊಂದಲು ಅರ್ಹತೆ ಹೊಂದಿವೆ' ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News