ಗರ್ಭಿಣಿಯರು ಅಂಗನವಾಡಿಗೆ ಹೋಗಿ ಆಹಾರ ಸೇವಿಸುವ ನಿಯಮ ಬದಲಾವಣೆ ಮಾಡಿ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

Update: 2022-03-25 13:36 GMT

ಬೆಂಗಳೂರು, ಮಾ. 25: ‘ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿಗೆ ಹೋಗಿ ಮಧ್ಯಾಹ್ನದ ಪೌಷ್ಟಿಕ ಬಿಸಿಯೂಟ ಮಾಡಬೇಕೆಂಬ ಸಾಮಾನ್ಯಜ್ಞಾನವಿಲ್ಲದೆ ರೂಪಿಸಿರುವ ಅವೈಜ್ಞಾನಿಕ ನಿಯಮವನ್ನು ಕೂಡಲೇ ಬದಲಾವಣೆ ಮಾಡಿ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಟಿ.ಡಿ.ರಾಜೇಗೌಡ ಕೇಳಿದ ಪ್ರಶ್ನೆಗೆ ಸಚಿವ ಹಾಲಪ್ಪ ಆಚಾರ್ ಉತ್ತರಿಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೇರಿ, ‘2017ರಲ್ಲಿ ಈ ನಿಯಮ ಜಾರಿ ಮಾಡಲಾಗಿದೆ. ಇದು ಅವೈಜ್ಞಾನಿಕವಾಗಿದ್ದು ಸರಿಪಡಿಸಿ, ಕೇಂದ್ರದ ಮಾರ್ಗಸೂಚಿ ಏನಾದರೂ ಇದ್ದರೆ ಕೇಂದ್ರ ಸರಕಾರಕ್ಕೆ ಕೂಡಲೇ ಪತ್ರ ಬರೆದು ಅದನ್ನು ಸರಿಪಡಿಸಲು ಕ್ರಮ ವಹಿಸಿ' ಎಂದು ಸಲಹೆ ನೀಡಿದರು.

‘ನಿಮ್ಮ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರನ್ನು ಬದಲಾಯಿಸಿ. ಇಲ್ಲದಿದ್ದರೆ ರಾಜ್ಯದ ಜನತೆ ನಿಮ್ಮನ್ನು ನಿಂದಿಸುತ್ತಾರೆ. ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿಗೆ ಹೋಗಿ ಊಟ ಮಾಡಬೇಕು ಎಂದರೆ ಅದು ಹೇಗೆ ಸಾಧ್ಯ' ಎಂದು ಕಾಗೇರಿ ಪ್ರಶ್ನಿಸಿದರು.

‘ಪೌಷ್ಟಿಕಾಂಶವುಳ್ಳ ಪದಾರ್ಥಗಳನ್ನು ಮನೆಗೆ ಕೊಟ್ಟರೆ ಅದನ್ನು ಗಂಡ, ಮಕ್ಕಳು, ಅತ್ತೆ, ಮಾವ ಊಟ ಮಾಡುತ್ತಾರೆಂಬುದು ಅಧಿಕಾರಿಗಳ ಮನಸ್ಸಿನಲ್ಲಿರಬೇಕು. ಆಯಾ ಕಾಲಕ್ಕೆ ತಕ್ಕಂತೆ ಅಧಿಕಾರಿಗಳು ವರದಿ ಕೊಡುತ್ತಾರೆ. ಆದರೆ, ಗರ್ಭಿಣಿಯರಿಗೆ ಏನು ಕೊಡಬೇಕೆಂದು ಮನೆಯವರಿಗೆ ಅಷ್ಟು ಅರಿವು ಇಲ್ಲ ಎಂಬ ಭಾವನೆ ಸರಿಯಲ್ಲ' ಎಂದು ಸ್ಪೀಕರ್ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ನಾಲಾಯಕ್ಕು: ‘ಕಾಂಗ್ರೆಸ್‍ಸದಸ್ಯರಾದ ಕೆ.ಆರ್.ರಮೇಶ್ ಕುಮಾರ್, ಅಂಜಲಿ ಲಿಂಬಾಳ್ಕರ್, ರೂಪಕಲಾ ಸೇರಿದಂತೆ ಇನ್ನಿತರರು, ‘ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರದ ನ್ಯೂನತೆಗಳನ್ನು ಸರಿಪಡಿಸಬೇಕು. ಇಲಾಖೆ ಅಧಿಕಾರಿಗಳು ಕಸಾಯಿಖಾನೆಯಲ್ಲಿ ಕೆಲಸ ಮಾಡಲೂ ಯೋಗ್ಯರಲ್ಲ' ಎಂದು ಟೀಕಿಸಿದರು.

ಬಳಿಕ ಉತ್ತರಿಸಿದ ಸಚಿವ ಹಾಲಪ್ಪ ಆಚಾರ್, ‘ಮಾತೃಪೂರ್ಣ ಯೋಜನೆಯಡಿ ಪ್ರತಿ ಫಲಾನುಭವಿಗೆ 21 ರೂ.ವೆಚ್ಚದಲ್ಲಿ ಪೌಷ್ಟಿಕ ಬಿಸಿಯೂಟವನ್ನು 2022ರ ಫೆ.14ರಿಂದ ನೀಡಲಾಗುತ್ತಿದೆ. ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಫೆಬ್ರವರಿವರೆಗೂ ಗರ್ಭಿಣಿ ಮತ್ತು ಬಾಣಂತಿಯರ ಮನೆಗೆ ಆಹಾರ ಸಾಮಗ್ರಿಗಳನ್ನು ನೀಡಲಾಗುತ್ತಿತ್ತು.

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿದಂತೆ ಗುಡ್ಡಗಾಡು ಪ್ರದೇಶದಲ್ಲಿ ಬಿಸಿಯೂಟದ ಬದಲು ಆಹಾರ ಸಾಮಗ್ರಿಗಳು ತಿಂಗಳಿಗೊಮ್ಮೆ ವಿತರಿಸುವ ಬಗ್ಗೆ ಪರಿಶೀಲಿಸಲಾಗುವುದು. ಎಂದು ತಿಂಗಳು ತುಂಬಿದ ಗರ್ಭಿಣಿಯರಿಗೆ ಹಾಗೂ ಹೆರಿಗೆಯಾದ 45 ದಿನಗಳವರೆಗಿನ ಬಾಣಂತಿಯರಿಗೆ ಬಿಸಿಯೂಟವನ್ನು ಮನೆ ಬಾಗಿಲಿಗೆ ನೀಡುವ ಸೌಲಭ್ಯ ಕಲ್ಪಿಸಲಾಗಿದೆ' ಎಂದು ತಿಳಿಸಿದರು.

ಗರ್ಭಪಾತವಾಗಲಿದೆ: ಶೃಂಗೇರಿ ಕ್ಷೇತ್ರದಲ್ಲಿ ಅಂಗನವಾಡಿ ಕೇಂದ್ರಗಳು ನಾಲ್ಕೈದು ಕಿಲೋ ಮೀಟರ್‍ಗಳಷ್ಟು ದೂರದಲ್ಲಿದ್ದು, ಗರ್ಭಿಣಿ ಮಹಿಳೆಯರು ಅಂಗನವಾಡಿ ಕೇಂದ್ರಗಳಿಗೆ ಹೋಗಿ ಪೌಷ್ಟಿಕಾಂಶವುಳ್ಳ ಬಿಸಿಯೂಟ ಸೇವಿಸಲು ತೆರಳಿದರೆ ಹಿಂದಿರುಗುವ ವೇಳೆಗೆ ಅವರಿಗೆ ಗರ್ಭಪಾತ ಆಗುವುದು ನಿಶ್ಚಿತ. ಹೀಗಾಗಿ ಈ ಯೋಜನೆ ಬದಲಾವಣೆ ಮಾಡಬೇಕು' ಎಂದು ಸದಸ್ಯ ರಾಜೇಗೌಡ ಆಗ್ರಹಿಸಿದರು.

‘ಮಾತೃಪೂರ್ಣ ಯೋಜನೆ ಜಾರಿ ಹಿನ್ನೆಲೆಯಲ್ಲಿ 2015ರ ಈಚೆಗೆ ತಾಯಂದಿರ ಮರಣ ಪ್ರಮಾಣ ಇಳಿಕೆಯಾಗುತ್ತಾ ಬಂದಿದೆ. 750 ಅಮೃತ ಅಂಗನವಾಡಿಗಳ ಸ್ಥಾಪನೆಗೆ 7.50 ಕೋಟಿ ರೂ.ನೀಡಲಾಗಿದೆ. ಅಂಗನವಾಡಿಗಳ ನಿರ್ವಹಣೆಗೆ 35 ಕೋಟಿ ರೂ.ನೀಡಲಾಗಿದೆ ಎಂದು ಬಿಜೆಪಿ ಸದಸ್ಯ ಸಂಜೀವ ಮಠಂದೂರು ಕೇಳಿದ ಮತ್ತೊಂದು ಪ್ರಶ್ನೆಗೆ ಹಾಲಪ್ಪ ಆಚಾರ್ ಉತ್ತರಿಸಿದರು.

ಹೊಸದಾಗಿ ಅಂಗನವಾಡಿ ಯೋಜನೆಗಳನ್ನು ನರೇಗಾ ಜೊತೆಗೂಡಿ ಮಾಡಲು ಉದ್ದೇಶಿಸಲಾಗಿದೆ. ಅಂಗನವಾಡಿಗಳ ಅನುದಾನವನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಅಂಗನವಾಡಿ ಕಟ್ಟಡಗಳ ನಿರ್ವಹಣೆ ದುರಸ್ತಿಗೆ ಕ್ರಿಯಯೋಜನೆಗೆ ಎಪ್ರಿಲ್ ತಿಂಗಳಿನಲ್ಲಿ ಕ್ರಿಯಾಯೋಜನೆ ರೂಪಿಸಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News