60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎರಡು ಟೋಲ್ ಗೇಟ್ ಇದ್ದರೆ ತೆರವಿಗೆ ಕ್ರಮ: ಸಚಿವ ಆರ್.ಅಶೋಕ್

Update: 2022-03-25 17:44 GMT

ಬೆಂಗಳೂರು, ಮಾ. 25: ‘ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಕನಿಷ್ಠ 60 ಕಿಲೋ ಮೀಟರ್ ಗೆ ಒಂದು ಟೋಲ್ ಗೇಟ್ ಸ್ಥಾಪಿಸಲಾಗುವುದು. ಆ ವ್ಯಾಪ್ತಿಯ ಒಳಗೆ ಟೋಲ್ ಗೇಟ್ ಇದ್ದರೆ ಅವುಗಳನ್ನು ತೆರವುಗೊಳಿಸಲು ಸರಕಾರ ಕ್ರಮ ವಹಿಸಲಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಭರವಸೆ ನೀಡಿದ್ದಾರೆ.

ಶುಕ್ರವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವುಗೊಳಿಸಲು ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿರುವುದು ಸರಕಾರದ ಗಮನಕ್ಕೆ ಬಂದಿದೆ. ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈಗಾಗಲೇ 60 ಕಿ.ಮೀಗೆ ಒಂದು ಟೋಲ್‍ಗೇಟ್ ಇರಬೇಕೆಂದು ಸ್ಪಷ್ಟಪಡಿಸಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಅದೇ ಮಾನದಂಡ ಅನುಸರಿಸಲಾಗುವುದು. ಈ ಬಗ್ಗೆ ಲೊಕೋಪಯೋಗಿ ಸಚಿವರ ಗಮನಕ್ಕೆ ತಂದು ಟೋಲ್ ಗೇಟ್ ತೆರವು ಮಾಡಲು ಕ್ರಮ ವಹಿಸಲಾಗುವುದು' ಎಂದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಯು.ಟಿ.ಖಾದರ್, ‘ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್, ತಲಪಾಡಿ ಹಾಗೂ ಪಡುಬಿದರೆಯಲ್ಲಿ ಟೋಲ್ ಗೇಟ್ ಅಳವಡಿಸಿದ್ದು, 60 ಕಿಲೋ ಮೀಟರ್‍ಗಳ ಒಳಗೆ ಟೋಲ್‍ಗೇಟ್‍ಗಳು ಅತ್ಯಂತ ಸಮೀಪದಲ್ಲೇ ಹಾಕಲಾಗಿದೆ. ಹೀಗಾಗಿ ಜನರಿಗೆ ತೊಂದರೆ ಆಗುತ್ತಿದ್ದು, ಕೂಡಲೇ ಸುರತ್ಕಲ್ ಟೋಲ್‍ಗೇಟ್ ತೆರವು ಮಾಡಬೇಕು. ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಜನರೂ ಪ್ರತಿಭಟನೆ ನಡೆಸಿದ್ದಾರೆ' ಎಂದು ಗಮನ ಸೆಳೆದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News