×
Ad

ಕ್ರಿಶ್ಚಿಯನ್ ಅಂದರೆ ಮತಾಂತರ ಮಾಡುವವರಲ್ಲ, ಪ್ರೀತಿ ಹಂಚಿ ಶಾಂತಿ ಕಾಪಾಡವವರು: ಶಾಸಕಿ ವಿನಿಶಾ ನಿರೋ

Update: 2022-03-25 21:36 IST

ಬೆಂಗಳೂರು, ಮಾ.25: ಕ್ರಿಶ್ಚಿಯನ್ ಅಂದರೆ ಮತಾಂತರ ಮಾಡುವವರಲ್ಲ. ಕ್ರಿಶ್ಚಿಯನ್ ಅಂದರೆ ಪ್ರೀತಿ ಹಂಚುವುದು ಮತ್ತು ಶಾಂತಿ ಕಾಪಾಡುವುದು ಎಂದು ಆಂಗ್ಲೊ ಇಂಡಿಯನ್ ಸದಸ್ಯೆ ವಿನಿಶಾ ನಿರೋ ಹೇಳಿದರು.

ಶುಕ್ರವಾರ ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ. ಕ್ರೈಸ್ತರು ನೂರಾರು ವರ್ಷಗಳಿಂದ ಭಾರತದ ಅಭಿವೃದ್ಧಿ, ಬೆಳವಣಿಗೆಗೆ ಶ್ರಮಿಸಿದ್ದಾರೆ. ಶಿಕ್ಷಣ, ಆರೋಗ್ಯ ಸೇವೆಗಳ ಮೂಲಕ ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು.

ನನ್ನ ಈ ಬ್ಯಾಗ್‍ನಲ್ಲಿ ಸರಕಾರದ ವಿವಿಧ ಸಚಿವರು ಹಾಗೂ ಶಾಸಕರು ಕೊಟ್ಟಿರುವ ಪತ್ರಗಳಿವೆ. ಆ ಪತ್ರಗಳೆಲ್ಲವೂ ಕ್ರೈಸ್ತರು ನಡೆಸುತ್ತಿರುವ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಕುರಿತದ್ದಾಗಿವೆ. ಕ್ರೈಸ್ತರ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತೆ ಎಂಬ ಕಾರಣಕ್ಕಾಗಿಯೇ ಅಲ್ಲವೆ ಇವರುಗಳು ಪತ್ರಗಳನ್ನು ಬರೆದಿರುವುದು ಎಂದು ವಿನಿಶಾ ನಿರೋ ಪ್ರಶ್ನಿಸಿದರು.

ನಾನು ಕಳೆದ 9 ವರ್ಷದಿಂದ ಈ ಮನೆಯ ಸದಸ್ಯೆಯಾಗಿದ್ದೇನೆ. ಯಾವತ್ತೂ ನನಗೆ ಇಲ್ಲಿ ಮಾತನಾಡಲು ಭಯವಾಗುತ್ತಿರಲಿಲ್ಲ. ಆದರೆ, ಇವತ್ತು ಭಯವಾಗುತ್ತಿದೆ. ವಿಧಾನಸಭೆ ಹಾಗೂ ರಾಜ್ಯಸಭೆಯಲ್ಲಿ ಆಂಗ್ಲೋ-ಇಂಡಿಯನ್ ಸದಸ್ಯರ ಸದಸ್ವತ್ವ ರದ್ದು ಮಾಡುತ್ತಿದ್ದಾರೆ. ಇದು ಅಸಂವಿಧಾನಿಕವಾಗಿದೆ. ಚರ್ಚ್‍ಗಳ ಮೇಲೆ ದಾಳಿ ಮಾಡಲಾಗುತ್ತಿದೆ, ನಮ್ಮ ಆಹಾರ ಪದ್ಧತಿಯ ವಿರುದ್ಧವಾಗಿರುವ ಕಾನೂನುಗಳು ಜಾರಿಗೆ ಬರುತ್ತಿವೆ, ಮತಾಂತರ ನಿಷೇಧ ಕಾಯ್ದೆ, ಅಲ್ಪಸಂಖ್ಯಾತರ ವಿದ್ಯಾಸಂಸ್ಥೆಗಳಿಗೆ ನೀಡುತ್ತಿದ್ದ ನೆರವು ಸ್ಥಗಿತಗೊಳಿಸುತ್ತಿರುವುದು ಇದೆಲ್ಲವನ್ನು ನೋಡುತ್ತಿದ್ದರೆ ನಮ್ಮ ಮನಸ್ಸಿನಲ್ಲಿ ಆತಂಕ ಮನೆ ಮಾಡುತ್ತಿದೆ ಎಂದು ವಿನಿಶಾ ನಿರೋ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಪಿ.ರಾಜೀವ್, ಈ ಸದನದಲ್ಲಿ ಒಪ್ಪಿಗೆ ಪಡೆದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಅಸಂವಿಧಾನಿಕ ಎಂದರೆ ಹೇಗೆ? ಅವರು ತಮ್ಮದೇ ಭಾಷಣ ಮಾಡುತ್ತಿದ್ದಾರಾ ಅಥವಾ ಬರೆದು ಕೊಟ್ಟಿರೋದನ್ನು ಓದುತ್ತಿದ್ದಾರೋ ಗೊತ್ತಿಲ್ಲ. ಕ್ರೈಸ್ತ ಮಿಷನರಿಗಳು ವ್ಯಾಪಕವಾಗಿ ಮತಾಂತರ ಮಾಡುತ್ತಿಲ್ಲವೇ? ಎಂದರು. ಈ ಸಂದರ್ಭದಲ್ಲಿ ವಿನಿಶಾ ನಿರೋ ನೆರವಿಗೆ ಧಾವಿಸಿದ ಕಾಂಗ್ರೆಸ್ ಸದಸ್ಯರಾದ ಪ್ರಿಯಾಂಕ್ ಖರ್ಗೆ, ಅಂಜಲಿ ನಿಂಬಾಳ್ಕರ್, ಯು.ಟಿ.ಖಾದರ್, ಝಮೀರ್ ಅಹ್ಮದ್ ಖಾನ್ ಸೇರಿದಂತೆ ಇನ್ನಿತರರು, ವಿನಿಶಾ ನಿರೋ ಅವರ ಮಾತುಗಳಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.

ವಿನಿಶಾ ನಿರೋ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡಿಲ್ಲ. ಶಾಸನ ಸಭೆಗಳಲ್ಲಿ ಆಂಗ್ಲೊ-ಇಂಡಿಯನ್ ಸಮುದಾಯದವರ ಸದಸ್ಯತ್ವವನ್ನು ರದ್ದು ಮಾಡುತ್ತಿರುವುದು ಅಸಂವಿಧಾನಿಕ ಎಂದು ಹೇಳಿದ್ದಾರೆ ಅಷ್ಟೇ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಅಲ್ಲದೆ, ವಿನಿಶಾ ನಿರೋ ಅವರು ಮತಾಂತರ ನಿಷೇಧ ಕಾಯ್ದೆ ಅಸಂವಿಧಾನಿಕ ಎಂದು ಹೇಳಿದ್ದರೆ ಅದನ್ನು ಕಡತದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು. ಅದಕ್ಕೆ ಸ್ಪೀಕರ್ ಸಮ್ಮತಿಸಿದ್ದರಿಂದ ಬಿಜೆಪಿ ಸದಸ್ಯರು ಶಾಂತರಾದರು. ನಂತರ ಮಾತು ಮುಂದುವರೆಸಿದ ವಿನಿಶಾ ನಿರೋ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ವಿಧಾನಸಭೆ ಹಾಗೂ ರಾಜ್ಯಸಭೆಯಲ್ಲಿ ಆಂಗ್ಲೋ-ಇಂಡಿಯನ್ ಸದಸ್ಯತ್ವವನ್ನು ರದ್ದು ಮಾಡುವ ಪ್ರಯತ್ನ ಸಂವಿಧಾನ ಬಾಹಿರವಾಗಿದೆ. ಈ ಹೇಳಿಕೆಗೆ ನಾನು ಬದ್ಧಳಾಗಿದ್ದೇನೆ. ಅದರ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಇತರ ಬೆಳವಣಿಗೆಗಳು ಕೂಡಾ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದ್ದೇನೆ ಎಂದರು.

ವಿವಿಧತೆಯಲ್ಲಿ ಏಕತೆ ನಮ್ಮ ಗುರುತು. ಒಂದು ಭಾರತ ಎಂದರೆ 30 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳು, 6 ಪ್ರಮುಖ ಧರ್ಮಗಳು, 3,000 ಜಾತಿಗಳು, 25 ಸಾವಿರ ಉಪ ಜಾತಿಗಳು, 121 ಭಾಷೆಗಳು, 270 ಮಾತೃಭಾಷೆಗಳು, 22 ಅಧಿಕೃತ ಭಾಷೆಗಳಿವೆ. ಇದೆಲ್ಲವೂ ಸೇರಿ ಒಂದು ಭಾರತ. ಪ್ರತಿಯೊಂದು ಧರ್ಮವು ತನ್ನದೇ ಆದ ಸಂಸ್ಕøತಿ, ಆಹಾರ ಪದ್ಧತಿಯನ್ನು ಹೊಂದಿದೆ. ಭಾರತವನ್ನು ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ಹೋಲಿಕೆ ಮಾಡಿದರೆ ನಾವು ಉತ್ತಮವಾಗಿ ಕಂಡು ಬರುತ್ತೇವೆ. ಒಂದು ಧರ್ಮ, ಒಂದು ಭಾಷೆಯ ಆಧಾರದಲ್ಲಿ ಭಾರತವನ್ನು ಕಾಣಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸಬ್ ಕಾ ಸಾಥ್, ಸಬ್ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್ ಅನ್ನೋದು ಕೇವಲ ಘೋಷಣೆಗೆ ಸೀಮಿತವಾಗದೆ, ಕಾರ್ಯರೂಪಕ್ಕೆ ಬರಬೇಕು. ಶಿಕ್ಷಣ, ಆರೋಗ್ಯಕ್ಕೆ ಕ್ರೈಸ್ತರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಿದ್ದರಾಮಯ್ಯ ಸರಕಾರದಲ್ಲಿ ಕ್ರೈಸ್ತರ ಅಭಿವೃದ್ಧಿಗೆ 200 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ನೀಡಿದ್ದರು. ಕುಮಾರಸ್ವಾಮಿ ಸರಕಾರದಲ್ಲಿ ಅದನ್ನು ಮುಂದುವರೆಸಿದರು. 2020-21ರಲ್ಲಿ 200 ಕೋಟಿ ರೂ.ಘೋಷಣೆ ಮಾಡಿದರು. ಆದರೆ, 50 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದರು. ಈ ವರ್ಷ50 ಕೋಟಿ ರೂ.ನೀಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News