ದಲಿತರ ಕುರಿತಂತೆ ಮೊಸಳೆ ಕಣ್ಣೀರು

Update: 2022-03-26 03:58 GMT

ಇತ್ತೀಚೆಗೆ ರಾಜಸ್ಥಾನದಲ್ಲಿ ಕಲಾಪ ನಡೆಯುತ್ತಿರುವಾಗ ಸಚಿವರೊಬ್ಬರು, ‘ರಾಜಸ್ಥಾನದಲ್ಲಿ ಅತ್ಯಾಚಾರ ಹೆಚ್ಚುತ್ತಿದೆ’ ಎನ್ನುವುದನ್ನು ಒಪ್ಪಿಕೊಂಡರು. ಆದರೆ ಅವರು ಅಷ್ಟಕ್ಕೇ ನಿಲ್ಲಿಸಲಿಲ್ಲ. ‘ರಾಜಸ್ಥಾನ ಗಂಡಸರ ರಾಜ್ಯವಾದುದರಿಂದ ಅತ್ಯಾಚಾರ ನಡೆಯುತ್ತದೆ. ಏನು ಮಾಡಲು ಸಾಧ್ಯ?’ ಎಂಬಂತಹ ಅಮಾನುಷ ಹೇಳಿಕೆಯನ್ನು ನೀಡಿದರು. ಅವರ ಪಾಲಿಗೆ ಇದೊಂದು ತಮಾಷೆಯ ಮಾತು. ಆದರೆ ಆಳದಲ್ಲಿ ಸಚಿವರು ಹೆಣ್ಣಿನ ಬಗ್ಗೆ ಎಂತಹ ಅಭಿಪ್ರಾಯವನ್ನು ತಾಳಿದ್ದಾರೆ ಎನ್ನುವುದನ್ನು ಇದು ಹೇಳುತ್ತದೆ. ರಾಜಸ್ಥಾನವನ್ನು ‘ಗಂಡಸರ ರಾಜ್ಯ’ ಎಂಬ ಬಣ್ಣನೆಯೇ ಅಸಮಾನತೆಯ ದ್ಯೋತಕ. ಸಚಿವರ ಪ್ರಕಾರ ರಾಜಸ್ಥಾನದಲ್ಲಿ ಗಂಡರಸರಷ್ಟೇ ಇರುವುದೇ? ಹೆಂಗಸರಿಗೂ ಆ ನೆಲಕ್ಕೂ ಯಾವ ಸಂಬಂಧವೂ ಇಲ್ಲವೇ? ಹೆಂಗಸರೆಲ್ಲ ಬೇರೆಯೆಡೆಯಿಂದ ವಲಸೆ ಬಂದವರೇ? ಈ ದೇಶದ ಹಲವು ಪ್ರದೇಶಗಳನ್ನು ಹೆಣ್ಣಿನ ಹೆಸರಿನಿಂದಲೇ ಗುರುತಿಸುತ್ತಾರೆ. ರಾಣಿ ಚೆನ್ನಮ್ಮ ಎಂದಾಗ ನೆನಪಿಗೆ ಬರುವುದು ಕಿತ್ತೂರು. ಲಕ್ಷ್ಮಿಬಾಯಿ ಎಂದಾಗ ನಮ್ಮ ಕಣ್ಣ ಮುಂದೆ ಬರುವುದು ಝಾನ್ಸಿ. ಗಂಡಿನಂತೆಯೇ ಕತ್ತಿ ಹಿಡಿದು ರಣರಂಗದಲ್ಲಿ ಹೋರಾಡಿದ ಮಹಿಳೆಯರು ಅದೆಷ್ಟೋ. ರಾಜಸ್ಥಾನವನ್ನು ಮಹಿಳಾ ಮುಖ್ಯಮಂತ್ರಿಯೇ ಆಳಿರುವಾಗ ರಾಜಸ್ಥಾನ ಕೇವಲ ಗಂಡಸಿನ ರಾಜ್ಯವಾಗುವುದಾದರೂ ಹೇಗೆ?

ಗಂಡಸಿನ ರಾಜ್ಯದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳಲ್ಲೂ ಜಾತಿಗಳಿಗೆ ಅನುಗುಣವಾಗಿ ವ್ಯತ್ಯಾಸಗಳಿರುತ್ತವೆ. ಮೇಲ್‌ ಜಾತಿಯ ಹೆಣ್ಣನ್ನು ಕೆಳಜಾತಿಯ ಗಂಡು ಪ್ರೀತಿಸಿದರೆ ಅದು ‘ಮರ್ಯಾದಾ ಹತ್ಯೆ’ಯಲ್ಲಿ ಮುಗಿಯುತ್ತದೆ. ಇದೇ ಸಂದರ್ಭದಲ್ಲಿ ಕೆಳಜಾತಿಯ ಜನರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮೇಲ್‌ಜಾತಿಯ ಪುರುಷರು ಬಳಸುವುದು ಕೆಳಜಾತಿಯ ಹೆಣ್ಣುಗಳನ್ನೇ ಆಗಿದೆ. ಮುಖ್ಯವಾಗಿ ‘ಅತ್ಯಾಚಾರ’ ಎನ್ನುವುದು ಗಂಡಸರ ರಾಜ್ಯದಲ್ಲಿ ಎಲ್ಲರ ಹಕ್ಕೇನೂ ಅಲ್ಲ. ಕೇವಲ ಮೇಲ್‌ಜಾತಿಯ, ಬಲಿಷ್ಠ ಜಾತಿಯ ಜನರ ಹಕ್ಕು ಅಷ್ಟೇ. ಇದನ್ನೇ ಅಲ್ಲಿನ ಸಚಿವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಸ್ಥಾನದಲ್ಲಿ ದಲಿತರು, ಆದಿವಾಸಿಗಳ ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚುತ್ತಿದ್ದರೆ, ಯುವಕರ ಹತ್ಯೆಗಳೂ ಹೆಚ್ಚುತ್ತಿವೆ. ಸರಕಾರ ನಿಧಾನಕ್ಕೆ ಬಲಿಷ್ಠ ಜಾತಿಗಳ ಹಿಡಿತಕ್ಕೆ ಬಂದಾಗ ಇದನ್ನು ಸಾಮಾನ್ಯವೆಂಬಂತೆ ಸರಕಾರ ಸ್ವೀಕರಿಸತೊಡಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜಸ್ಥಾನದಲ್ಲಿರುವುದು ಕಾಂಗ್ರೆಸ್ ಸರಕಾರ. ದಲಿತರು, ಶೋಷಿತರ ಪರವಾಗಿ ಚುನಾವಣೆಯ ಸಂದರ್ಭದಲ್ಲಿ ಮಾತನಾಡುವ ಕಾಂಗ್ರೆಸ್ ಪಕ್ಷವಿರುವಾಗಲೇ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದ ಮೇಲೆ, ಮೇಲ್‌ಜಾತಿಯನ್ನು ಓಲೈಸಿಕೊಂಡೇ ಅಧಿಕಾರಕ್ಕೆ ಬರುವ ಬಿಜೆಪಿ ಸರಕಾರ ಇದ್ದರೆ ಇಲ್ಲಿಯ ಸ್ಥಿತಿ ಇನ್ನೇನಾಗಬಹುದು?

ವಿಪರ್ಯಾಸವೆಂದರೆ, ಉತ್ತರ ಪ್ರದೇಶ ಚುನಾವಣೆಯ ಸೋಲಿನಿಂದಾಗಿ ಸಂಪೂರ್ಣ ಅಜ್ಞಾತವಾಸದಲ್ಲಿರುವ ಬಿಎಸ್‌ಪಿ ನಾಯಕಿ ಮಾಯಾವತಿ ‘ದಲಿತರಿಗೆ ರಕ್ಷಣೆಯಿಲ್ಲ, ಸರಕಾರವನ್ನು ವಜಾಗೊಳಿಸಿ’ ಎಂದು ಆಕ್ರೋಶ ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ.ಹಾಗೆಂದು ಅವರು ಹೇಳಿಕೆ ನೀಡಿರುವುದು, ತನ್ನ ನೆಲೆಯಾಗಿರುವ ಉತ್ತರ ಪ್ರದೇಶ ಸರಕಾರದ ಬಗ್ಗೆಯಲ್ಲ. ರಾಜಸ್ಥಾನದ ಸರಕಾರದ ಬಗ್ಗೆ. ‘‘ರಾಜಸ್ಥಾನದ ಕಾಂಗ್ರೆಸ್ ಸರಕಾರದ ಅಡಿಯಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯ ಘಟನೆಗಳಲ್ಲಿ ತೀವ್ರವಾಗಿ ಏರಿಕೆಯಾಗಿದೆ. ಇತ್ತೀಚೆಗೆ ದಿಡ್ಡಾನ ಹಾಗೂ ಜೋಧಪುರದಲ್ಲಿ ದಲಿತ ಯುವಕರ ಹತ್ಯೆ ನಡೆದಿದೆ. ಈ ಘಟನೆಗಳು ದಲಿತ ಸಮಾಜವನ್ನು ನಡುಗಿಸಿದೆ’’ ಎಂದು ಮಾಯಾವತಿ ಅವರು ಟ್ವೀಟ್ ಮಾಡಿದ್ದಾರೆ. ವಿಪರ್ಯಾಸವೆಂದರೆ, ತನ್ನ ಪಾದಬುಡದಲ್ಲಿಯೇ ದಲಿತರ ಮೇಲೆ ಭಯಾನಕ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಿರುವಾಗ ಅದರ ವಿರುದ್ಧ ಯಾವ ಆಕ್ರೋಶ, ಆಂದೋಲನಗಳನ್ನು ಮಾಡದ ಮಾಯಾವತಿ, ರಾಜಸ್ಥಾನದ ಸ್ಥಿತಿಗತಿಯ ಬಗ್ಗೆ ಚಿಂತಿತರಾಗಿದ್ದಾರೆ. ಹಾಗಾದರೆ ತನ್ನದೇ ನೆಲದಲ್ಲಿ ದಲಿತರೆಲ್ಲರೂ ಕ್ಷೇಮವಾಗಿದ್ದಾರೆಯೆ?

ಉತ್ತರ ಪ್ರದೇಶದ ಸರಕಾರದ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಬಳಿಕ ತಾನೇ ರಾಜಸ್ಥಾನದ ಕುರಿತಂತೆ ಕಾಳಜಿ ವಹಿಸಬೇಕಾಗಿರುವುದು? ಯೋಗಿ ಆದಿತ್ಯನಾಥ್ ಅವರ ಕಳೆದ ಬಾರಿಯ ಆಡಳಿತದಲ್ಲಿ ಉತ್ತರ ಪ್ರದೇಶದ ದಲಿತರ ಮೇಲೆ ನಡೆದ ಅತ್ಯಾಚಾರಗಳ ಸಂಖ್ಯೆಯ ನೆನಪಾದರೂ ಮಾಯಾವತಿಯವರಿಗಿದೆಯೇ? ಹಾಥರಸ್‌ನಲ್ಲಿ ಏನೇನು ಸಂಭವಿಸಿದವು ಎನ್ನುವ ಕುರಿತ ಸಣ್ಣ ನೋವು ಅವರೊಳಗಿದ್ದರೂ, ಈ ಬಾರಿ ಬಿಜೆಪಿ ಇಷ್ಟೊಂದು ಸ್ಥಾನಗಳನ್ನು ಪಡೆಯಲು ಮಾಯಾವತಿಯವರು ಅವಕಾಶ ನೀಡುತ್ತಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ಅವರ ಬಿಎಸ್‌ಪಿಯು ಬಿಜೆಪಿಯ ಬಿ ಟೀಮ್ ಆಗಿ ಕಾರ್ಯನಿರ್ವಹಿಸಿತು ಎಂದು ಮಾಧ್ಯಮಗಳು ವಿಶ್ಲೇಷಿಸಿವೆ. ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಯಾವುದೇ ವಾಗ್ದಾಳಿ ನಡೆಸದೆ, ಪರೋಕ್ಷವಾಗಿ ಆದಿತ್ಯನಾಥ್ ಸರಕಾರವನ್ನು ಸಮರ್ಥಿಸುತ್ತಾ ಬಂದರು. ಆದಿತ್ಯನಾಥ್ ಆಡಳಿತದಲ್ಲಿ ದಲಿತರ ಮೇಲೆ ಅತ್ಯಾಚಾರ ನಡೆದಿರುವುದು ಮಾತ್ರವಲ್ಲ, ಆರೋಪಿಗಳನ್ನು ಸರಕಾರದ ನೇತೃತ್ವದಲ್ಲೇ ರಕ್ಷಿಸುವ ಪ್ರಯತ್ನ ನಡೆಯಿತು. ಇದೇ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮ್ ಯುವಕರನ್ನು ಅನ್ಯಾಯವಾಗಿ ಬಂಧಿಸಿ ಜೈಲಿಗಟ್ಟಿತು.

ಇಂತಹ ಸರಕಾರದೊಂದಿಗೆ ಒಳಗೊಳಗೆ ಗೆಳೆತನ ಮಾಡುತ್ತಾ, ದೂರದ ರಾಜಸ್ಥಾನ ಸರಕಾರವನ್ನು ವಜಾಗೊಳಿಸಿ ಎಂದು ಕೇಳುವ ನೈತಿಕತೆ ಮಾಯಾವತಿ ಅವರಿಗಿದೆಯೇ? ಉತ್ತರ ಪ್ರದೇಶದಲ್ಲಿ ಬಹುಜನ ಪಕ್ಷಕ್ಕೆ ಒದಗಿದ ದೈನೇಸಿ ಸೋಲು, ಇಂದು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಮೇಲ್‌ಜಾತಿಗಳಿಗೆ ಇನ್ನಷ್ಟು ಶಕ್ತಿಕೊಟ್ಟಿದೆ. ಉತ್ತರ ಪ್ರದೇಶದಲ್ಲಿ ಬಹುಜನರು ಮತ್ತೊಮ್ಮೆ ಸಂಘಟಿತರಾಗಿ ರಾಜಕೀಯ ಶಕ್ತಿಯಾಗುತ್ತಾರೆ ಎನ್ನುವುದನ್ನು ಊಹಿಸುವುದಕ್ಕೂ ಕಷ್ಟ ಎನಿಸಿದೆ. ಅದಕ್ಕೆ ಮುಖ್ಯ ಕಾರಣ ಮಾಯಾವತಿಯವರ ಸಮಯ ಸಾಧಕ ರಾಜಕಾರಣ. ಮುಂದಿನ ದಿನಗ ಳಲ್ಲಿ ಮೇಲ್‌ಜಾತಿಗಳೇ ಬಹುಜನರಾಗಿ ಸಂಘಟಿತಗೊಂಡು ದುರ್ಬಲರ ಮೇಲೆ ಅತ್ಯಾಚಾರ, ದೌರ್ಜನ್ಯಗಳನ್ನು ಎಸಗಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಕಾನ್ಶೀರಾಂ ದೂರದೃಷ್ಟಿಯಿಂದ ಸಂಘಟಿಸಿದ ಬಹುಜನ ಚಳವಳಿಯನ್ನು ಸಣ್ಣ ಬೆಲೆಗೆ ಮಾರಾಟ ಮಾಡಿದ ಮಾಯಾವತಿಯವರೇ ಈ ದೌರ್ಜನ್ಯಗಳಿಗೆ ಪರೋಕ್ಷ ಹೊಣೆಗಾರರೂ ಆಗುತ್ತಾರೆ. ದಲಿತರ ಮೇಲೆ ದೌರ್ಜನ್ಯ ನಡೆಸಿದ ಸರಕಾರವೊಂದನ್ನು ಮತ್ತೆ ಅಧಿಕಾರಕ್ಕೇರಲು ಸಹಕರಿಸಿದ ಮಾಯಾವತಿಯವರಿಗೆ, ರಾಜಸ್ಥಾನದ ಸರಕಾರವನ್ನು ವಜಾಗೊಳಿಸಿ ಎನ್ನುವ ನೈತಿಕತೆ ಇಲ್ಲ. ಬರೇ ಬಿಜೆಪಿಯನ್ನು ಮೆಚ್ಚಿಸುವ ಭಾಗವಾಗಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆಯೇ ಹೊರತು, ದಲಿತರ ಮೇಲಿನ ಕಾಳಜಿಯಿಂದಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News