ಪಾಕ್ ಗಣರಾಜ್ಯೋತ್ಸವ ಶುಭಾಶಯ ಕೋರಿ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ ಮುಧೋಳ ಯುವತಿಯ ಬಂಧನ

Update: 2022-03-26 11:42 GMT

ಬಾಗಲಕೋಟೆ: ಪಾಕಿಸ್ತಾನದ ಗಣರಾಜ್ಯೋತ್ಸವ ದಿನದಂದು ಜನರಿಗೆ ಶುಭಾಶಯ ಸಲ್ಲಿಸಿ ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಸ್ಲಿಂ ಯುವತಿಯೊಬ್ಬಳ ವಿರುದ್ಧ ಪೊಲೀಸರು ಐಪಿಸಿ ಯ ವಿವಿಧ ಸೆಕ್ಷನ್‍ಗಳನ್ವಯ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಿದ್ದಾರೆ.

ಮುಧೋಳದ 25 ವರ್ಷದ ಕುತ್ಮಾ ಶೇಖ್ ಎಂಬ ಯುವತಿ ಬುಧವಾರ ತನ್ನ ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ ಪಾಕಿಸ್ತಾನದ ಗಣರಾಜ್ಯೋತ್ಸವ ದಿನದ ಕುರಿತ ಸಂದೇಶಗಳನ್ನು ಪೋಸ್ಟ್ ಮಾಡಿದ್ದಳು.

"ಆಕೆ ಪಾಕಿಸ್ತಾನದ ಗಣರಾಜ್ಯೋತ್ಸವ ದಿನದ ಶುಭಾಶಯಗಳನ್ನು ತಿಳಿಸುವ ವಾಟ್ಸ್ ಆ್ಯಪ್ ಸ್ಟೇಟಸ್ ಅನ್ನು ಬುಧವಾರ ಹಾಕಿದ್ದಳು. ಅದನ್ನು ಗಮನಿಸಿದ ಅರುಣ್ ಭಜಂತ್ರಿ ಎಂಬಾತ ದೂರು ದಾಖಲಿಸಿ ಸಾಕ್ಷ್ಯವನ್ನೂ ಒದಗಿಸಿದ್ದರು. ಆ ದೂರಿನ ಆಧಾರದ ಮೇಲೆ ಕ್ರಮಕೈಗೊಂಡು ಕುತ್ಮಾ ಶೇಖ್‍ಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.

ಮುಧೋಳ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 153(ಎ) (ವಿವಿಧ ಗುಂಪುಗಳ ನಡುವೆ ಧರ್ಮ, ಜಾತಿ, ಹುಟ್ಟಿದ ಸ್ಥಳ, ವಾಸಸ್ಥಳ ಆಧಾರಿತ ದ್ವೇಷ ಹರಡುವುದು), ಸೆಕ್ಷನ್ 505(1) (ವಿವಿಧ ವರ್ಗಗಳ ನಡುವೆ ದ್ವೇಷ ಮೂಡಿಸುವುದು) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.

"ಆಕೆಯನ್ನು ದೂರು ನೀಡಿದ ದಿನವೇ ಬಂಧಿಸಲಾಗಿದೆ. ಯಾವುದೇ ಪ್ರತಿಭಟನೆ ನಡೆದಿಲ್ಲ, ಎಲ್ಲವೂ ಶಾಂತವಾಗಿದೆ. ದ್ವೇಷ ಹರಡುವ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್ ಗಳ ಮೂಲಕ ಅಶಾಂತಿ ಸೃಷ್ಟಿಸುವ ಯತ್ನದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಸೋಶಿಯಲ್ ಮೀಡಿಯಾ ಪೋಸ್ಟ್ ಗಳನ್ನು  ಅವಲೋಕಿಸಲಾಗುತ್ತದೆ,'' ಎಂದು ಎಸ್‍ಪಿ ಲೋಕೇಶ್ ಜಗಲಸರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News