×
Ad

ನಿರೀಕ್ಷಣಾ ಜಾಮೀನು ಕೋರಿ ಸಚಿವ ಸೋಮಣ್ಣ ಅರ್ಜಿ: ವಕಾಲತ್ತು ಹಾಕುವಂತೆ ದೂರುದಾರರಿಗೆ ಕೋರ್ಟ್ ನೋಟಿಸ್

Update: 2022-03-26 17:23 IST
ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು, ಮಾ.26: ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ವಸತಿ ಸಚಿವ ವಿ.ಸೋಮಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆ ನಡೆಸಿದ್ದು, ದೂರುದಾರ ರಾಮಕೃಷ್ಣ ಅವರಿಗೆ ನೋಟಿಸ್ ಜಾರಿ ಮಾಡಿದೆ. 

ಸಚಿವ ಸೋಮಣ್ಣ ಅವರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರತಿವಾದಿ ದೂರುದಾರ ಮೂಡಲಪಾಳ್ಯದ ರಾಮಕೃಷ್ಣ ಅವರಿಗೆ ವಕಾಲತ್ತು ಹಾಕುವಂತೆ ಆದೇಶಿಸಿ ಪ್ರಕರಣವನ್ನು ಮುಂದಿನ ಸೋಮವಾರಕ್ಕೆ ಮುಂದೂಡಿದೆ.

ಅಕ್ರಮ ಆಸ್ತಿಗಳಿಕೆ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಸಲ್ಲಿಸಿರುವ ವರದಿಯನ್ನು ನ್ಯಾಯಾಲಯವು ಕಳೆದ ಸೋಮವಾರ ತಿರಸ್ಕರಿಸಿತ್ತು. ಸೋಮಣ್ಣ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ನೀಡಿತ್ತು. ಎ.16ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೋಮಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿದೆ. 

ಶೇ.204 ಅಕ್ರಮ ಆಸ್ತಿ: ಕರ್ನಾಟಕ ಲೋಕಾಯುಕ್ತ ಕಾಯ್ದೆ ಅಡಿ ಸೋಮಣ್ಣ ತಮ್ಮ ಆಸ್ತಿ ಕುರಿತು ಸ್ವಯಂ ಘೋಷಣೆ ಮಾಡಿಕೊಂಡಿರುವ ಮಾಹಿತಿ ಪ್ರಕಾರ 1993-94 ರಿಂದ 2009-10ರ ಅವಧಿಯಲ್ಲಿ ಅವರ ಆಸ್ತಿಯು 18,49,89,441 ರೂ.ಆಗಿದೆ. ಈ ಪೈಕಿ ಅಂದಾಜು 12.42 ಕೋಟಿ ರೂ.ಅಕ್ರಮ ಆಸ್ತಿ ಕಂಡು ಬಂದಿದೆ. ಅಕ್ರಮ ಆಸ್ತಿಯ ಪ್ರಮಾಣ ಶೇ.204 ಆಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News