ಸೋಮವಾರದಿಂದ ಎಸೆಸೆಲ್ಸಿ ಪರೀಕ್ಷೆ: 3444 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿರುವ 8,73,846 ವಿದ್ಯಾರ್ಥಿಗಳು
ಬೆಂಗಳೂರು, ಮಾ.26: 2021-22ನೇ ಸಾಲಿನ ಎಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗಳು ಇದೇ ಮಾ.28ರ ಸೋಮವಾರದಿಂದ ಎ.11ರವರೆಗೆ ರಾಜ್ಯದ 3,444 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಇದಕ್ಕೂ ಮೊದಲು ಪರೀಕ್ಷೆ ಬರೆದು ಅನುತ್ತೀರ್ಣರಾಗಿದ್ದ 5,871 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 8,73,846 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಯನ್ನು ಬರೆಯಲಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಪರೀಕ್ಷೆಗಳಿಗೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದ್ದು, 3,444 ಪರೀಕ್ಷಾ ಕೇಂದ್ರಗಳಿಗೆ ಒಬ್ಬೊಬ್ಬ ಮುಖ್ಯ ಅಧೀಕ್ಷಕರನ್ನು, 377 ಉಪಮುಖ್ಯ ಅಧೀಕ್ಷಕರನ್ನು, 49,817 ಕೊಠಡಿ ಮೇಲ್ವಿಚಾರಕರನ್ನು ನೇಮಿಸಿದೆ.
ರಾಜ್ಯದ 15,387 ಶಾಲೆಗಳಿಂದ 8,73,846 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 4,52,732 ಗಂಡುಮಕ್ಕಳು, 4,21,110 ಹೆಣ್ಣುಮಕ್ಕಳು ಮತ್ತು 4 ಮಂದಿ ತೃತೀಯ ಲಿಂಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಂತಿಮ ಪ್ರವೇಶ ಪತ್ರವನ್ನು ಮಾ.16ರಿಂದಲೇ ಮಂಡಳಿಯು ಬಿಡುಗಡೆಗೊಳಿಸಿತ್ತು. ವಿದ್ಯಾರ್ಥಿಗಳ ಗೊಂದಲವನ್ನು ಬಗೆಹರಿಸಲು 080-23310075 ದೂರವಾಣಿ ಸಂಖ್ಯೆಯ ಸಹಾಯವಾಣಿಯನ್ನು ತೆರೆಯಲಾಗಿದ್ದು, ಮಾ.27ರಂದು ಸಂಜೆ 6ವರೆಗೆ ಕರೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ. ಎಸೆಸ್ಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ಅಥವಾ ವಿದ್ಯಾರ್ಥಿ ಪಾಸನ್ನು ವಿದ್ಯಾರ್ಥಿಗಳು ತಮ್ಮ ಬಳಿ ಇರಿಸಿಕೊಂಡು ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ಪತ್ತೆಯಾಗುತ್ತಿದ್ದರೂ, ವಿದ್ಯಾರ್ಥಿಗಳು ಸೇರಿದಂತೆ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಎಲ್ಲಾ ಶಿಕ್ಷಕರು, ಅಧಿಕಾರಿಗಳು, ಸಿಬ್ಬಂದಿಯವರು ಸುರಕ್ಷತಾ ದೃಷ್ಟಿಯಿಂದ ಎಸ್‍ಓಪಿ ಅನ್ನು ಪಾಲಿಸಬೇಕಾಗಿರುತ್ತದೆ.
ಎ.21ರಿಂದ ಮೌಲ್ಯಮಾಪನ
ಮೌಲ್ಯಮಾಪನ ಕಾರ್ಯವು ಎ.21 ರಿಂದ 234 ಮೌಲ್ಯಮಾಪನ ಕೇಂದ್ರಗಳಲ್ಲಿ ನಡೆಯಲಿದ್ದು, 60,000 ಶಿಕ್ಷಕರನ್ನು ಮೌಲ್ಯಮಾಪನಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಮಂಡಳಿಯು ಪ್ರಕಟನೆಯಲ್ಲಿ ತಿಳಿಸಿದೆ.