ಮಾ.28ಕ್ಕೆ ಸಾರಿಗೆ ಘಟಕಗಳಲ್ಲಿ ‘ವೇತನ ಪರಿಷ್ಕರಣೆ ಜಾರಿಗೆ ಆಗ್ರಹಿಸಿ' ಧರಣಿ ಸತ್ಯಾಗ್ರಹ

Update: 2022-03-26 16:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 26: ದೇಶದ ಕಾರ್ಮಿಕ ಸಂಘಟನೆಗಳು ಇದೇ ತಿಂಗಳ 28 ಮತ್ತು 29ರಂದು ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ವೇತನ ಪರಿಷ್ಕರಣೆ, ನಾಲ್ಕೂ ಸಾರಿಗೆ ನಿಗಮಗಳನ್ನು ರದ್ದು ಮಾಡಿ ಒಂದೇ ನಿಗಮವನ್ನು ಮಾಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕಸ್ಸ್ ಫೆಡರೇಷನ್ ಮಾ.28ರಂದು ಎಲ್ಲ ವಿಭಾಗ, ಘಟಕಗಳಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ಕರೆ ನೀಡಿದೆ.

ಈ ಸಂಬಂಧ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ. ಅವರು ಪ್ರಕಟಣೆ ನೀಡಿದ್ದು, ‘ರಾತ್ರಿ ಪಾಳಿಯಲ್ಲಿ ಚಾಲಕ ಕಂ ನಿರ್ವಾಹಕರನ್ನು ನಿಯೋಜನೆ ಮಾಡುವುದು ಕೈಬಿಡಬೇಕು. ಬಾರ್ ಡ್ಯೂಟಿಗಳನ್ನು ತೆಗೆದು ಎ.ಬಿ ಡ್ಯೂಟಿಗಳನ್ನು ಮಾಡಬೇಕು. ಖಾಸಗಿಕರಣ ನಿಲ್ಲಿಸಬೇಕು, ಡೀಸೆಲ್, ಪೆಟ್ರೋಲ್ ಹಾಗೂ ಅಡುಗೆ ಅನಿಲ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

‘ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ಮಾಸಿಕ 7,500 ರೂ.ಗಳ ಆಹಾರ ಮತ್ತು ಆದಾಯ ಬೆಂಬಲ ಒದಗಿಸಬೇಕು. ಅಂಗನವಾಡಿ, ಆಶಾ, ಬಿಸಿಯೂಟ ಮತ್ತು ಇತರೆ ಸ್ಕೀಮ್ ಕಾರ್ಮಿಕರಿಗೆ ಶಾಸನ ಬದ್ಧ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸುವುದು ಸೇರಿದಂತೆ ಫೆಡರೇಷನ್ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News