ಎಸೆಸೆಲ್ಸಿ ಪರೀಕ್ಷೆ: ಚಿಕ್ಕಮಗಳೂರು ಜಿಲ್ಲಾದ್ಯಂತ 70 ಪರೀಕ್ಷಾ ಕೇಂದ್ರಗಳು
ಚಿಕ್ಕಮಗಳೂರು: ಸೋಮವಾರದಿಂದ ಎ.11ರವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲಾದ್ಯಂತ 70 ಪರೀಕ್ಷೆ ಕೇಂದ್ರಗಳಲ್ಲಿ 14,610 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಜಿಲ್ಲೆಯಲ್ಲಿ 13,335 ರೆಗ್ಯೂಲರ್ ವಿದ್ಯಾರ್ಥಿಗಳು, 1,064 ಖಾಸಗಿ ವಿದ್ಯಾರ್ಥಿಗಳು, 118 ಶಾಲಾ ಪುನರಾವರ್ತಿತ ವಿದ್ಯಾರ್ಥಿಗಳು, 38 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 2011ರ ಸಾಲಿನ 55 ವಿದ್ಯಾರ್ಥಿಗಳು ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದು, ಜಿಲ್ಲಾದ್ಯಂತ ಸೋಮವಾರ 14610 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.
ಜಿಲ್ಲೆಯಲ್ಲಿ 8 ಶೈಕ್ಷಣಿಕ ವಲಯಗಳಿದ್ದು. ಬೀರೂರು ವಲಯದಲ್ಲಿ 1,414 ವಿದ್ಯಾರ್ಥಿಗಳು, ಚಿಕ್ಕಮಗಳೂರು ವಲಯದಲ್ಲಿ 4,225 ವಿದ್ಯಾರ್ಥಿಗಳು, ಕಡೂರು ವಲಯದಲ್ಲಿ 2,426 ವಿದ್ಯಾರ್ಥಿಗಳು, ಕೊಪ್ಪ ವಲಯದಲ್ಲಿ 1,137 ವಿದ್ಯಾರ್ಥಿಗಳು, ಮೂಡಿಗೆರೆ ವಲಯದಲ್ಲಿ 1,486 ವಿದ್ಯಾರ್ಥಿಗಳು, ನರಸಿಂಹರಾಜಪರು ವಲಯದಲ್ಲಿ 1,068 ವಿದ್ಯಾರ್ಥಿಗಳು, ಶೃಂಗೇರಿ ವಲಯದಲ್ಲಿ 620 ವಿದ್ಯಾರ್ಥಿಗಳು ಹಾಗೂ ತರೀಕೆರೆ ವಲಯದಲ್ಲಿ 2,234 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಎಸೆಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮೂರು ಖಾಸಗಿ ಪರೀಕ್ಷಾ ಕೇಂದ್ರಗಳು ಸೇರಿದಂತೆ 70 ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷೆ ವೇಳೆ ಕರ್ತವ್ಯ ನಿರ್ವಹಿಸಲು 50 ಜಾಗೃತಿ ದಳದ ಅಧಿಕಾರಿಗಳನ್ನು, 800 ಮೇಲ್ವಿಚಾರಕರು, 72ಮುಖ್ಯ ಅಧೀಕ್ಷಕರು, 70 ಕಸ್ಟೋಡಿಯನ್, 70 ಸ್ಥಾನಿಕ ಹಾಗೂ 70 ಮೊಬೈಲ್ ಸ್ವಾಧೀನಾಧಿಕಾರಿ, 70 ದೈಹಿಕ ಶಿಕ್ಷಕರು, 70 ವಿಷಯ ನಿರ್ವಾಹಕರು, 56 ಮಾರ್ಗಾಧಿಕಾರಿಗಳು ಮತ್ತು ವಾಹನ ಚಾಲಕರು, 140 ಡಿಗ್ರೂಪ್ ನೌಕರರು, 140 ನೀರು ಸಬರರಾಜು ಸಹಾಯಕರು, 206 ಪೊಲೀಸ್ ಸಿಬ್ಬಂದಿಗಳು, 140 ಆರೋಗ್ಯ ಸಿಬ್ಬಂದಿಗಳು, 140 ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೇರಿಂತೆ 2,094 ಸಿಬ್ಬಂದಿಯನ್ನುನ್ನು ನಿಯೋಜಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಪರೀಕ್ಷೆ ಕೊಠಡಿಗಳನ್ನು ಸ್ಯಾನಿಟೈಸರ್ ಮಾಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಲಾ 2 ಮಾಸ್ಕ್ ಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದ ನೀಡಲಾಗುತ್ತಿದೆ. ಎಸೆಸೆಲ್ಸಿ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಪರೀಕ್ಷೆಯ ಗುರುತಿನ ಚೀಟಿ ತೋರಿಸಿದಲ್ಲಿ ವಿದ್ಯಾರ್ಥಿಗಳಿಗೆ ಟಿಕೆಟ್ ರಹಿತ ಉಚಿತ ಪ್ರಯಾಣಕ್ಕೆ ಕೆಎಸ್ಸಾರ್ಟಿಸಿ ಸಂಸ್ಥೆ ವ್ಯವಸ್ಥೆ ಕಲ್ಪಿಸಿದೆ.
ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲೂ ಸಂಬಂಧಿಸಿದ ಶಾಲೆಗಳ ಸಮವಸ್ತ್ರ ಧರಿಸಿಯೇ ಪರೀಕ್ಷೆ ಬರೆಯಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ಈ ಸಂಬಂಧ ಸೂಚನೆ ನೀಡಲಾಗಿದೆ. ವಿದ್ಯಾರ್ಥಿನಿಯರು ಹಿಜಾಬ್ ಅಥವಾ ಸ್ಕಾರ್ಫ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ.
- ಮಲ್ಲೇಶಪ್ಪ, ಡಿಡಿಪಿಐ