ಹಿಂದುತ್ವದ ಹೆಸರಿನಲ್ಲಿ ಶಾಂತಿ ಕದಡುವ ಯತ್ನ: ಪರಿಷತ್ ಸದಸ್ಯ ಎಚ್.ವಿಶ್ವನಾಥ್
ಬೆಳಗಾವಿ: ‘ಪ್ರಧಾನಿ ಮೋದಿಯವರು ಎಲ್ಲಿಯೂ ಹಿಂದುತ್ವದ ಬಗ್ಗೆ ಮಾತನಾಡುವುದಿಲ್ಲ. ಆದರೆ, ಕರ್ನಾಟಕ ರಾಜ್ಯದಲ್ಲಿ ಮಾತ್ರ ಹಿಂದುತ್ವದ ಹೆಸರಿನಲ್ಲಿ ಶಾಂತಿ, ಸಾಮರಸ್ಯ ಕದಡುವ ಯತ್ನ ನಡೆಯುತ್ತಿದೆ' ಎಂದು ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಇಂದಿಲ್ಲಿ ಆರೋಪಿಸಿದ್ದಾರೆ.
ರವಿವಾರ ಜಿಲ್ಲೆಯ ಗೋಕಾಕ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಎಲ್ಲ ಪಕ್ಷಗಳ ಸಿದ್ಧಾಂತಗಳು ಸರಿಯಾಗಿವೆ. ಆದರೆ, ಪಕ್ಷಗಳ ಮುಖಂಡರು ಪಕ್ಷದ ಹೆಸರಿನಲ್ಲಿ ಸಮಾಜದಲ್ಲಿ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರ ಅಂಗಡಿಗಳನ್ನು ನಿಷೇಧಿಸುವುದು ಸರಿಯಲ್ಲ' ಎಂದು ಆಕ್ಷೇಪಿಸಿದರು.
‘ಮುಸ್ಲಿಮರು ಈ ದೇಶದ ಪ್ರಜೆಗಳಾಗಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿ ಸರಕಾರದ ಮೇಲಿದೆ. ಆದರೆ, ಸರಕಾರ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ನಮ್ಮ ದೇಶದ ಪ್ರಜೆಗಳು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಮುಸ್ಲಿಂ ರಾಷ್ಟ್ರದಲ್ಲಿ ಏನಾದರೂ ಹಿಂದುಗಳನ್ನು ಹೊರ ಹಾಕಿದರೆ ಅವರಿಗೆಲ್ಲ ಇಲ್ಲಿ ಕೆಲಸ ಕೂಡಲು ನಿಮಗೆ ಆಗುತ್ತದೆ?' ಎಂದು ಅವರು ಪ್ರಶ್ನಿಸಿದರು.
‘ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಲು ರಮೇಶ್ ಜಾರಕಿಹೊಳಿ ಅವರೇ ಪ್ರಮುಖ ಕಾರಣ. ಇದೀಗ ಅವರನ್ನೇ ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ರಮೇಶ್ ಜಾರಕಿಹೊಳಿ ಅವರು ನಮ್ಮ ಸ್ನೇಹಿತರು, ಕಾರಣ ರಾಜಕೀಯದಲ್ಲಿ ಕೃತಜ್ಞತೆಯೇ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಸಂಪುಟ ಪುನಾರಚನೆ, ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ವಿಧಾನಸಭೆಯಿಂದ ಆಯ್ಕೆಯಾಗಿ ನಾನು ಪರಿಷತ್‍ಗೆ ಬರಬೇಕಿತ್ತು. ಆದರೆ, ಅದನ್ನು ತಪ್ಪಿಸಿ ನಾಮ ನಿರ್ದೇಶನ ಪರಿಷತ್ ಸದಸ್ಯರನ್ನಾಗಿ ಮಾಡಿದರು. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ' ಎಂದು ಸ್ಪಷ್ಟಪಡಿಸಿದರು.
‘ನಾನು ಸಚಿವ ಆಗುವುದನ್ನು ಮಣ್ಣು ಮಾಡಿದ್ದ ಬಿ.ವೈ.ವಿಜಯೇಂದ್ರ ಹಾಗೂ ಯಡಿಯೂರಪ್ಪ. ನಮಗೆ ಈ ವಿಷಯದಲ್ಲಿ ಅನ್ಯಾಯ ಮಾಡಿದರು. ನಮ್ಮನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ವಿಚಾರದಲ್ಲಿ ಅನ್ಯಾಯವಾಗಿದೆ ಎಂದ ಅವರು, ಸಂಪುಟ ವಿಸ್ತರಣೆಯಾಗಬೇಕೆನ್ನುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿದೆ. ಇನ್ನು ಕೆಲ ಶಾಸಕರು ಈ ಕುರಿತಂತೆ ಬಹಿರಂಗವಾಗಿ ಮಾತನಾಡಿದ್ದು, ರಮೇಶ್‍ಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹವಿದೆ. ಆದರೆ, ಪಕ್ಷ ಏನು ತೀರ್ಮಾನ ಕೈಗೊಳ್ಳಲಿದೆ ಎಂದು ಕಾದು ನೋಡಬೇಕು' ಎಂದು ತಿಳಿಸಿದರು.