×
Ad

ದಂಪತಿ ನಡುವೆ ಮನಸ್ಥಾಪವಿದೆ ಎಂಬ ಕಾರಣಕ್ಕೆ ವಿಚ್ಛೇದನ ಡಿಕ್ರಿ ನೀಡುವುದು ಸರಿಯಲ್ಲ: ಹೈಕೋರ್ಟ್

Update: 2022-03-27 22:29 IST

ಬೆಂಗಳೂರು, ಮಾ. 27: ‘ದಂಪತಿ ಮಧ್ಯೆ ಮನಸ್ಥಾಪವಿದೆ ಎಂಬ ಕಾರಣಕ್ಕೆ ಹಾಗೂ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಕಾರಣಗಳಿಗೆ ವಿವಾಹ ವಿಚ್ಛೇದನ ಕೋರಿಕೆಯನ್ನು ಪರಿಗಣಿಸಿ ಡಿಕ್ರಿ ನೀಡುವುದು ಸರಿಯಲ್ಲ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪತಿಯ ಮನವಿಯ ಮೇರೆಗೆ ವಿವಾಹ ವಿಚ್ಛೇದನ ಡಿಕ್ರಿ ನೀಡಿದ್ದ ಬೆಂಗಳೂರಿನ 4ನೆ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್ ನ್ಯಾಯಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ದಂಪತಿಯ ನಡುವೆ ಸರಿಪಡಿಸದ ಮನಸ್ಥಾಪವಿದೆ. 9 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಅಂಶಗಳನ್ನು ಪರಿಗಣಿಸಿ ವಿಚ್ಛೇದನದ ಡಿಕ್ರಿ ನೀಡಿರುವ ಕೌಟುಂಬಿಕ ನ್ಯಾಯಾಲಯದ ಆದೇಶ ಸಮಂಜಸವಲ್ಲ. ದಂಪತಿ ನಡುವಿನ ಆರೋಪಗಳನ್ನು ಆಯಾ ಸಮಾಜದ ರೀತಿ ರಿವಾಜುಗಳ ನಿರ್ದಿಷ್ಟ ತಳಹದಿಯಲ್ಲಿ ಗಮನಿಸಬೇಕಾಗುತ್ತದೆ ಎಂದಿದೆ.

ಪ್ರಕರಣವೇನು: ಪತ್ನಿ ಮದುವೆಯಾದ ನಂತರ ಪ್ರತ್ಯೇಕ ಮನೆಗೆ ಹೋಗುವಂತೆ ಒತ್ತಾಯಿಸಿ ನಿರಂತರ ಜಗಳ ಮಾಡುತ್ತಿದ್ದಳಲ್ಲದೇ, ಯಾವುದೇ ಮಾಹಿತಿ ನೀಡದೆ ತವರು ಮನೆಗೆ ಹೋಗುತ್ತಿದ್ದಳು. 

ತಾಯಿ, ತಮ್ಮನನ್ನು ಬಿಟ್ಟು ಬರುವಂತೆ ಇಟ್ಟಿದ್ದ ಬೇಡಿಕೆಯನ್ನು ನಾನು ಒಪ್ಪಿರಲಿಲ್ಲ. ಇದಕ್ಕೆ ಕೋಪಗೊಂಡು ತವರಿಗೆ ಹೋದ ಬಳಿಕ ವಕೀಲರ ಮುಖಾಂತರ ನೋಟಿಸ್ ಕೊಡಿಸಿದ್ದೆ. ಇದೇ ಕಾರಣಕ್ಕೆ ನನ್ನ ಮತ್ತು ಕುಟುಂಬ ಸದಸ್ಯರ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾಳೆ. ಹೀಗಾಗಿ, ನನಗೆ ಪತ್ನಿಯಿಂದ ವಿಚ್ಛೇದನ ಕೊಡಿಸಿ ಎಂದಿದ್ದ ಪತಿಯ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿತ್ತು.

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ಪೀಠ, ಪತ್ನಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆಂಬ ಕಾರಣಕ್ಕೆ ಕ್ರೌರ್ಯ ಎಂದು ಒಪ್ಪಲಾಗದು. ಕ್ರೌರ್ಯ ಪದವನ್ನು ಗಮನಿಸುವಾಗ ಅದು ದೈಹಿಕವಾಗಿ ಅಥವಾ ಮಾನಸಿಕವಾಗಿ ಅಪಾಯ ಒಡ್ಡುವಂತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News