ಜೂ.16ರಿಂದ ಸಿಇಟಿ ಪರೀಕ್ಷೆ, ಎ.5ರಿಂದ ಅರ್ಜಿ ಸಲ್ಲಿಕೆ ಆರಂಭ: ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

Update: 2022-03-28 11:45 GMT
 ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ

ಬೆಂಗಳೂರು, ಮಾ.28: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿಪರ ಶಿಕ್ಷಣ ಕೋರ್ಸ್‍ಗಳ ಪ್ರವೇಶಾತಿಗಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ-2022(ಸಿಇಟಿ)ಗೆ ಎ.5 ರಿಂದ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಜೂ.16, 17 ಮತ್ತು 18ರಂದು ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ಸೋಮವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ಎ.5ರಿಂದ 20ರವರೆಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು, ಎ.22ರವರೆಗೆ ಶುಲ್ಕವನ್ನು ಪಾವತಿಸಲು ಕೊನೆಯ ದಿನವಾಗಿದೆ. ಮೇ 2ರಿಂದ 6ವರೆಗೆ ಅರ್ಜಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮೇ 30ರಿಂದ ಪರೀಕ್ಷಾ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.

ಜೂ.16ರ ಬೆಳಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ. ಜೂ.17ರ 10.30ರಿಂದ 11.50ರವರೆಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ, ಜೂ.18ರ ಬೆಳಗ್ಗೆ 10.30ರಿಂದ 11.50ರವರೆಗೆ ಹೊರನಾಡು ಮತ್ತು ಗಡಿನಾಡ ಕನ್ನಡಿಗರಿಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News