ಲೋಕೋಪಯೋಗಿ ಇಲಾಖೆಯಲ್ಲಿ ಏಕರೂಪ ದರ ಪಟ್ಟಿ ಜಾರಿ: ಸಚಿವ ಸಿ.ಸಿ.ಪಾಟೀಲ್

Update: 2022-03-28 13:28 GMT

ಬೆಂಗಳೂರು, ಮಾ. 28: ‘ಇದೇ ಮೊದಲ ಬಾರಿಗೆ ಕಟ್ಟಡ ಮತ್ತು ರಸ್ತೆ ನಿರ್ಮಾಣಕ್ಕೆ ರಾಜ್ಯಾದ್ಯಂತ ಏಕರೂಪ ದರಪಟ್ಟಿ ಜಾರಿ ಮಾಡಲಾಗಿದ್ದು, ಇದರಿಂದ ರಾಜ್ಯ ಸರಕಾರದ ಬೊಕ್ಕಸದ ಹಣ ಉಳಿತಾಯವಾಗಲಿದೆ' ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಸೋಮವಾರ 2022-23ನೆ ಸಾಲಿನ ಲೋಕೋಪಯೋಗಿ ಇಲಾಖೆ ಅನುದಾನ ಬೇಡಿಕೆಗಳ ಮೇಲಿನ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ವಿವಿಧ ಎಂಜಿನಿಯರ್ ವಿಭಾಗಗಳಲ್ಲಿ ಒಂದೊಂದು ರೀತಿಯ ದರ ಪಟ್ಟಿ ಇತ್ತು. ಹೀಗಾಗಿ ರಾಜ್ಯದದಲ್ಲಿದ್ದ 32 ದರ ಪಟ್ಟಿಯನ್ನು ಇದೀಗ ಏಕರೂಪ ಮಾಡಿದ್ದು, ಇದರಿಂದ ಅನುಕೂಲ ಆಗಲಿದೆ' ಎಂದರು.

ಟೋಲ್ ರದ್ದತಿಗೆ ಕ್ರಮ: ‘ಕೆಲ ಟೋಲ್ ಗೇಟ್‍ಗಳಲ್ಲಿ ನಿಯಮ ಉಲ್ಲಂಘನೆ ಆಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಸುಧಾರಣೆ ತರಲು ಕ್ರಮ ಕೈಗೊಳ್ಳಲಾಗಿದೆ. ಟೋಲ್‍ಗೇಟ್ ನಿರ್ವಹಣೆ ಗುತ್ತಿಗೆ ಪಡೆದ ಏಜೆನ್ಸಿಗಳ ಜೊತೆ ಸಭೆ ನಡೆಸಿದರೂ ಪೂರ್ಣ ಪ್ರಮಾಣದಲ್ಲಿ ಪ್ರಯೋಜನವಾಗಿಲ್ಲ. ನಿಯಮ ಉಲ್ಲಂಘನೆ ಮಾಡುವ ಟೋಲ್‍ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರಕಾರದ ಟೋಲ್ ಆಗಿದ್ದರೆ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಲಾಗುವುದು' ಎಂದು ಅವರು ಸ್ಪಷ್ಟಪಡಿಸಿದರು.

‘ರಾಜ್ಯದಲ್ಲಿನ ರೈಲ್ವೆ ಕೆಳಸೇತುವೆ, ಮೇಲ್ಸೇತುವೆ ಕಾಮಗಾರಿಗಳ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. 2018-19ರಲ್ಲಿ ಆಗಿರುವ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಅಪೆಂಡಿಕ್ಸ್-ಇನಲ್ಲಿ ಅನುದಾನ ಬಿಡುಗಡೆ ಸಾಧ್ಯವಾಗಿಲ್ಲ. ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಸಿಎಂ ಜೊತೆ ಅಪೆಂಡಿಕ್ಸ್-ಇನಲ್ಲಿ ಅನುದಾನ ಒದಗಿಸಲಾಗುವುದು. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 600 ಕೋಟಿ ರೂ. ಹಣ ಒದಗಿಸಲಾಗಿದೆ ಎಂದು ತಿಳಿಸಿದರು.

‘ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಸಣ್ಣ ಸಣ್ಣ ಹಳ್ಳ, ತೊರೆಗಳಿಗೆ ಕಾಲುಸಂಕ ಅಥವಾ ಗ್ರಾಮಬಂಧು ಸೇತುವೆ ನಿರ್ಮಾಣಕ್ಕೆ 200 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದ ಪ್ರಮುಖ ನಗರಗಳಿಗೆ ವರ್ತುಲ ರಸ್ತೆ ನಿರ್ಮಾಣದ ಜೊತೆಗೆ ಗುಣಮಟ್ಟದ ರಸ್ತೆ ಜಾಲ ನಿರ್ಮಾಣಕ್ಕೆ ಸರಕಾರ ಬದ್ಧವಾಗಿದೆ' ಎಂದು ಅವರು ತಿಳಿಸಿದರು.

‘ರಾಜ್ಯದಲ್ಲಿ 91,120 ಕಿ.ಮೀ ರಸ್ತೆ ಜಾಲವಿದ್ದು 7 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳು ವಿವಿಧ ಹಂತದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ವಲಯಕ್ಕೆ ನಾಲ್ಕು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಟೆಂಡರ್ ಕರೆಯುವಾಗ ನಿಗದಿತ ದರಕ್ಕಿಂತ ಕಡಿಮೆ ನಮೂದಿಸುವ ಗುತ್ತಿಗೆಗಾರರ ಕಾಮಗಾರಿ ಮೇಲೆ ನಿಗಾ ಇಡಲಾಗುವುದು. ಕಡಿಮೆ ಮೊತ್ತ ನಮೂದಿಸುವುದನ್ನು ತಡೆಯಲು ಸಾಧ್ಯವಿಲ್ಲ' ಎಂದು ಅವರು ಸ್ಪಷ್ಟಣೆ ನೀಡಿದರು.

ಅಗತ್ಯಕ್ಕೆ ಆಧರಿಸಿ ಅತಿಥಿಗೃಹ: ‘ರಾಜ್ಯದಲ್ಲಿ ಇನ್ನು ಮುಂದೆ ಅಗತ್ಯತೆಯನ್ನು ಆಧರಿಸಿ ಅತಿಥಿಗೃಹ(ಪ್ರವಾಸಿ ಮಂದಿರ) ನಿರ್ಮಾಣ ಮಾಡಲಾಗುವುದು. ಗುತ್ತಿಗೆದಾರರು ಅಥವಾ ಯಾರೊಬ್ಬರಿಗೆ ಅನುಕೂಲವಾಗುವಂತೆ ಐಬಿಗಳನ್ನು ಮಾಡುವುದಿಲ್ಲ. ಚಿತ್ರದುರ್ಗದ ಅತಿಥಿ ಗೃಹವನ್ನು ಮಾದರಿಯಾಗಿ ಪರಿಗಣಿಸಲಾಗುವುದು ಎಂದು ಸಿ.ಸಿ.ಪಾಟೀಲ್ ಹೇಳಿದರು.

‘2014ರಿಂದ 2018ರವರೆಗೆ ಕಾಂಗ್ರೆಸ್ ಶಾಸಕರಿಗೆ ಸರಾಸರಿ 156 ಕೋಟಿ ರೂ., ಜೆಡಿಎಸ್ ಶಾಸಕರಿಗೆ ಸರಾಸರಿ 148 ಕೋಟಿ ರೂ. ಹಾಗೂ ಬಿಜೆಪಿ ಶಾಸಕರಿಗೆ 122 ಕೋಟಿ ರೂ.ಅನುದಾನ ಲೋಕೋಪಯೋಗಿ ಇಲಾಖೆಯಲ್ಲಿ ದೊರೆತಿದೆ. ಬಿಜೆಪಿ ಸರಕಾರ ಬಂದ ಬಳಿಕ ಕಾಂಗ್ರೆಸ್ ಶಾಸಕರಿಗೆ 19 ಕೋಟಿ ರೂ., ಜೆಡಿಎಸ್ ಶಾಸಕರಿಗೆ 21 ರೂ. ಹಾಗೂ ಬಿಜೆಪಿ ಶಾಸಕರಿಗೆ 42 ಕೋಟಿ ರೂ.ಸರಾಸರಿ ಅನುದಾನ ದೊರೆತಿದೆ' ಎಂದು ಅವರು ವಿವರ ನೀಡಿದರು.

‘2019-20ನೆ ಸಾಲಿನಲ್ಲಿ ಉಂಟಾದ ಪ್ರವಾಹದಲ್ಲಿ 1,814 ರಸ್ತೆ, ಸೇತುವೆ, ಪುನರುನಿರ್ಮಾಣಕ್ಕೆ 497 ಕೋಟಿ ರೂ.ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಹಾಳಾಗಿರುವ 1,604 ರಸ್ತೆ ಸೇತುವೆ ನಿರ್ಮಾಣ ಕಾಮಗಾರಿಯನ್ನು 679 ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ನಮ್ಮ ಸರಕಾರ ಆದ್ಯತೆ ನೀಡಿದೆ' ಎಂದು ಅವರು ತಿಳಿಸಿದರು.

ಆ ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಲೋಕೋಪಯೋಗಿ ಇಲಾಖೆಯ ಅನುದಾನ ಬೇಡಿಕೆಯನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಒಪ್ಪಿಗೆ ದೊರೆಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ವೆಂಕಟರಮಣಯ್ಯ, ಆನೇಕಲ್ ಶಿವಣ್ಣ ಸಚಿವರ ಉತ್ತರದಿಂದ ತೃಪ್ತರಾಗದೆ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿಗೆ ಮುಂದಾದರು. ಸ್ಪೀಕರ್ ಮನವೊಲಿಕೆ ಬಳಿಕ ಸದಸ್ಯರು ತಮ್ಮ ಸ್ಥಾನಗಳಿಗೆ ಮರಳಿದರು.

‘ಕೇಂದ್ರ ಸರಕಾರ ಈಗಾಗಲೇ 60 ಕಿಲೋ ಮೀಟರ್‍ಗೆ ಒಂದು ಟೋಲ್ ಎಂದು ಸೂಚನೆ ನೀಡಿದೆ. ಹೀಗಾಗಿ ಆ ನಿಯಮವನ್ನು ಅನುಷ್ಠಾನಕ್ಕೆ ತರಬೇಕು. ಟೋಲ್‍ಗಳಲ್ಲಿ ಗೂಂಡಾಗಿರಿ ತಪ್ಪಿಸಲು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಕೆಲವು ಕಡೆಗಳಲ್ಲಿ ಟೋಲ್‍ಗಳ ಜವಾಬ್ದಾರಿಯನ್ನು ಕ್ರಿಮಿನಲ್‍ಗಳಿಗೆ ವಹಿಸಿದ್ದು, ಇದನ್ನು ಸರಿಪಡಿಸಬೇಕು'

-ಯು.ಟಿ.ಖಾದರ್ ವಿಪಕ್ಷ ಉಪನಾಯಕ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News