ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆ ಸಾಧ್ಯವಿಲ್ಲ: ಸಚಿವ ಉಮೇಶ್ ಕತ್ತಿ

Update: 2022-03-28 13:39 GMT
ಸಚಿವ ಉಮೇಶ್ ಕತ್ತಿ

ಬೆಂಗಳೂರು, ಮಾ.28: ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರಕ್ಕೆ ತಕ್ಕಂತೆ ದರ ನಿಗದಿಯಾಗುತ್ತಿರುವುದರಿಂದ ನಾವು ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ನಿಯಂತ್ರಣ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಅಸಹಾಯತೆ ವ್ಯಕ್ತಪಡಿಸಿದರು.

ಸೋಮವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಎಸ್.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಉಕ್ರೇನ್ ಮತ್ತು ರಶ್ಯಾ ಯುದ್ಧಕ್ಕೂ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಸಂಬಂಧವಿಲ್ಲ. ಬದಲಾಗಿ, ಖಾದ್ಯ ತೈಲ ಬೇಸಿಗೆ ಕಾಲದಲ್ಲಿ ಹೆಚ್ಚಾಗುವುದು ಸಹಜ. ಹಾಗಾಗಿ, ಪಾಮಾಯಿಲ್ ಹೆಚ್ಚುವರಿ ಆಮುದು ಮಾಡಿಕೊಳ್ಳಲಾಗುತ್ತಿದೆ ಎಂದರು.

ದರ ಹೆಚ್ಚು ಕಡಿಮೆ ಎಲ್ಲವೂ ಅಂತರ್‍ರಾಷ್ಟ್ರೀಯ ಮಾರುಕಟ್ಟೆ ಮೇಲೆ ಅವಲಂಬಿಸಿದೆ ಎಂದ ಅವರು, ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಕಡಿತ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರನ್ನೆ ಕೇಳಬೇಕು ಎಂದು ಅವರು ನುಡಿದರು.

ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಖಾದ್ಯ ತೈಲ ಅಗತ್ಯ ದಾಸ್ತಾನು ಇದೆ. ಮತ್ತೊಂದೆಡೆ ಕಬ್ಬಿಣದ ಬೆಲೆ ಕೂಡ ಅಂತರ್‍ರಾಷ್ಟ್ರೀಯ ಮಾರುಕಟ್ಟೆ ಅವಲಂಬಿಸಿದೆ. ಎಣ್ಣೆ, ಕಬ್ಬಿಣ ಎಲ್ಲ ಕೂಡ ಅಂತರ್‍ರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದೆ ಎಂದು ಕೈಚೆಲ್ಲಿದರು.

ಇದಕ್ಕೂ ಮೊದಲು ಎಸ್.ರವಿ ಪ್ರಸ್ತಾಪಿಸಿ, ಅಡುಗೆ ಎಣ್ಣೆ ಸೇರಿದಂತೆ ಇನ್ನಿತರೆ ವಸ್ತುಗಳ ಬೆಲೆ ಏರಿಕೆ ಆಗಿದೆ. ಈ ಸಂಬಂಧ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದೆ. ಆದರೆ, ಇದಕ್ಕೆ ದಾಸ್ತಾನು ಮೀತಿ ಏರಿಕೆ ಮಾಡಲಾಗಿದೆ ಎಂದು ಸರಕಾರ ಹೇಳಿದೆ ಹೊರತು ಸಮಸ್ಯೆಗೆ ಪರಿಹಾರ ಒದಗಿಸಲು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

8 ಲಕ್ಷ ಬಿಪಿಎಲ್: ರಾಜ್ಯದಲ್ಲಿ 8 ಲಕ್ಷ ಬಿಪಿಎಲ್ ಕಾರ್ಡ್‍ಗಳ ವಿತರಣೆ ಬಾಕಿ ಇದ್ದು, ಜೂನ್ ಅಂತ್ಯದ ಒಳಗೆ ಎಲ್ಲ ಅರ್ಜಿಗಳ ಪರಿಶೀಲನೆ ನಡೆಸಿ ಸಮೀಕ್ಷೆ ಪೂರ್ಣಗೊಳಿಸಿ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಮೇಶ್ ಕತ್ತಿ ಇದೇ ವೇಳೆ ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News