ಮಡಿಕೇರಿ: ಹುಲಿ ದಾಳಿಗೆ ಕಾರ್ಮಿಕ ಬಲಿ

Update: 2022-03-28 14:56 GMT

ಮಡಿಕೇರಿ, ಮಾ.28 : ಹುಲಿ ದಾಳಿಗೆ ಸಿಲುಕಿ ತೋಟ ಕಾರ್ಮಿಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ 1ನೇ ರುದ್ರುಗುಪ್ಪೆ ಗ್ರಾಮದಲ್ಲಿ ನಡೆದಿದೆ.

ಮೂಲತಃ ಗೋಣಿಕೊಪ್ಪ ಅತ್ತೂರು ಗ್ರಾಮದ ಗದ್ದೆಮನೆ ನಿವಾಸಿ ತೋಟ ಕಾರ್ಮಿಕ ಎರವರ ಗಣೇಶ್ ಪುಟ್ಟು(29) ಎಂಬವರೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಘಟನೆ ವಿವರ  ವಿರಾಜಪೇಟೆ 1ನೇ ರುದ್ರುಗುಪ್ಪೆ ಗ್ರಾಮ ನಿವಾಸಿ ಕೊಂಗಂಡ ಅಯ್ಯಪ್ಪ ಅವರ ತೋಟದಲ್ಲಿ ಗಣೇಶ್ ಪುಟ್ಟು ಕರಿಮೆಣಸು ಕುಯ್ಯುವ ಕೆಲಸ ಮಾಡುತ್ತಿದ್ದರು. ಸೋಮವಾರ ಸಂಜೆ 4 ಗಂಟೆಯ ಸಮಯದಲ್ಲಿ ತೋಟದೊಳಗಿದ್ದ ಹುಲಿ ಏಕಾಏಕಿ ಗಣೇಶ್ ಮೇಲೆ ದಾಳಿಮಾಡಿ ತಲೆಯ ಭಾಗಕ್ಕೆ ಕಚ್ಚಿದ್ದು, ಗಣೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ವಿರಾಜಪೇಟೆ ವಲಯ ಅರಣ್ಯಾಧಿಕಾರಿಗಳು, ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. 

ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ 

ಹುಲಿ ದಾಳಿಗೆ ವ್ಯಕ್ತಿ ಬಲಿಯಾದ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಗಳ ನೂರಾರು ಮಂದಿ ಮತ್ತು ರೈತ ಸಂಘದ ಪ್ರಮುಖರು ಸ್ಥಳದಲ್ಲಿ ಜಮಾಯಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಮೃತದೇಹವನ್ನು ಸ್ಥಳದಿಂದ ಸಾಗಿಸಲು ಮುಂದಾಗಿದ್ದರು ಎನ್ನಲಾಗಿದ್ದು, ಇದಕ್ಕೂ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೂಲಿ ಕಾರ್ಮಿಕ ಗಣೇಶ್ ಜೀವ ಬಿಟ್ಟ ಸ್ಥಳದಲ್ಲಿ ಕಳೆದ 10 ದಿನಗಳ ಹಿಂದೆ ಅಲ್ಲಿನ ನಿವಾಸಿ ಆಟ್ರಂಗಡ ಸುಬ್ಬಯ್ಯ ಎಂಬವರಿಗೆ ಸೇರಿದ ಕರು ಕೂಡ ಹುಲಿ ದಾಳಿಗೆ ಬಲಿಯಾಗಿತ್ತು. ಆದರೆ ಅರಣ್ಯ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಕಾರ್ಮಿಕ ಜೀವ ಕಳೆದು ಕೊಳ್ಳುವಂತಾಯಿತು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸ್ಥಳಕ್ಕೆ ಸಿಸಿಎಫ್ ಅಥವಾ ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಬೇಕು. ಇಲ್ಲವಾದಲ್ಲಿ ಮೃತದೇಹವನ್ನು ಸ್ಥಳದಿಂದ ತೆರವುಗೊಳಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News