ರಾಜ್ಯದಲ್ಲಿ ಧರ್ಮದ್ವೇಷವನ್ನು ನಿಯಂತ್ರಿಸುವಂತೆ ಮುಖ್ಯಮಂತ್ರಿಗೆ ಸಾಹಿತಿಗಳು, ಕಲಾವಿದರಿಂದ ಬಹಿರಂಗ ಪತ್ರ

Update: 2022-03-29 06:18 GMT

ಬೆಂಗಳೂರು, ಮಾ.28: ಎಸೆಸೆಲ್ಸಿ ಪರೀಕ್ಷೆಯ ಹಿಂದಿನ ದಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಸ್ತ್ರ ಸಂಹಿತೆಯನ್ನು ವಿಧಿಸಿ ಏಕಾಏಕಿ ಹೊರಡಿಸಿದ ಅವೈಜ್ಞಾನಿಕ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ರಾಜ್ಯದ ಪ್ರಗತಿಪರ ಚಿಂತಕರಾದ ಡಾ. ಕೆ.ಮರುಳಸಿದ್ದಪ್ಪ, ಡಾ. ವಿಜಯಾ, ಎಸ್.ಜಿ. ಸಿದ್ಧರಾಮಯ್ಯ, ಬೊಳುವಾರ ಮಹ್ಮದ್ ಕುಂಞ ಸೇರಿದಂತೆ 60ಕ್ಕೂ ಹೆಚ್ಚಿನ ಬರಹಗಾರರು, ಸಾಹಿತಿಗಳು, ಕಲಾವಿದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಬವರಿಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. 

ಶೈಕ್ಷಣಿಕ ವರ್ಷಾಂತ್ಯದಲ್ಲಿ ಅನಗತ್ಯವಾಗಿ ಎದ್ದ ಶಿರವಸ್ತ್ರ ವಿವಾದದಿಂದ ತೊಂದರೆಗೊಳಗಾದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಸಾಂವಿಧಾನಿಕ ಶಿಕ್ಷಣದ ಹಕ್ಕನ್ನು ನಿರಾಕರಿಸದೇ ಸಮವಸ್ತ್ರ ಭಾಗವಾಗಿ ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದ್ದು, ಅದಕ್ಕೆ ಅಗತ್ಯವಾದ ಸೂಚನೆಯನ್ನು ಅಧಿಕೃತವಾಗಿ ಸರಕಾರವು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. 

ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲಿ ಧರ್ಮ ಭೇದವಿಲ್ಲದೇ ಈ ಮೊದಲು ನಡೆಯುತ್ತಿದ್ದ ಸಾಮರಸ್ಯ ಪರಂಪರೆಯ ಚಟುವಟಿಕೆಗಳು ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಬೇಕು. ದುರುದ್ದೇಶಪೂರ್ವಕವಾಗಿ ಅದನ್ನು ಹಾಳುಗೆಡಹುತ್ತಿರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

ಧರ್ಮ ಮತ್ತು ಮತಾಂಧತೆಯ ಅಮಲೇರಿಸಿಕೊಂಡು ಶಾಂತಿ ನೆಮ್ಮದಿಗೆ ಭಂಗ ತರುತ್ತಿರುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಭಗವದ್ಗೀತೆಯನ್ನು ಪ್ರಸ್ತಾಪವನ್ನು ಕೈಬಿಡಬೇಕು. ಕನ್ನಡ ನೆಲದ ಸಾಮರಸ್ಯ ಪರಂಪರೆಗೆ ಯಾವುದೇ ಕುತ್ತು ಬಾರದಂತೆ ಸರಕಾರವು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News