ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ: ಎಂ.ಬಿ.ಪಾಟೀಲ್

Update: 2022-03-28 17:34 GMT

ಬೆಂಗಳೂರು, ಮಾ.28: ಜನರ ಭಾವನೆ ಜತೆ ಚೆಲ್ಲಾಟವಾಡುತ್ತಿರುವ ಬಿಜೆಪಿಯನ್ನು ಕರ್ನಾಟಕದಿಂದ ಕಿತ್ತೊಗೆದು, ಕುವೆಂಪು ಅವರು ಬಯಸಿದ ಸರ್ವಜನಾಂಗದ ಶಾಂತಿಯ ತೋಟ ನಿರ್ಮಿಸುತ್ತೇವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ್ ಪ್ರತಿಜ್ಞೆ ಮಾಡಿದರು.

ಸೋಮವಾರ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಅನ್ನ, ಅಕ್ಷರ, ಆಶ್ರಯ, ಆರೋಗ್ಯ, ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.

ಹಸಿದ ಹೊಟ್ಟೆಗೆ ಬೇಕಿರೋದು ಅನ್ನ. ಹೀಗಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಯಾರೂ ಹಸಿವಿನಿಂದ ಮಲಗಬಾರದು ಎಂದು ಪಡಿತರ ವ್ಯವಸ್ಥೆ ಜಾರಿಗೆ ತಂದರು. ಅದೇರೀತಿ, ಸಿದ್ದರಾಮಯ್ಯ ಅವರ ಸರಕಾರದ ಅವಧಿಯಲ್ಲಿ ಅನ್ನ ಭಾಗ್ಯ ಯೋಜನೆ ಕೊಟ್ಟು ಬಡವರ ಹಸಿವು ನೀಗಿಸಿದ್ದರು. ಇದು ಮಾಡಿದ್ದು ನಮ್ಮ ಕಾಂಗ್ರೆಸ್ ಸರಕಾರ ಎಂದರು.

ಅದೇರೀತಿ, ಮಾಜಿ ಮನಮೋಹನ್ ಸಿಂಗ್ ಅವರು ಎಲ್ಲರಿಗೂ ಕಡ್ಡಾಯ ಶಿಕ್ಷಣ ಸಿಗಬೇಕು ಎಂದು ಶಿಕ್ಷಣ ಹಕ್ಕು ಜಾರಿಗೆ ತಂದರು. ನಮ್ಮ ಸರಕಾರ ಇದ್ದಾಗ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಎಲ್ಲ ಪದವಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ ನೀಡಲು ಮುಂದಾಗಿತ್ತು. ಪರಮೇಶ್ವರ್ ಅವರು ಸಚಿವರಾಗಿದ್ದಾಗ ಅಕ್ಕ ಮಹಾದೇವಿ ಅವರ ಹೆಸರಲ್ಲಿ ಮಹಿಳಾ ವಿಶ್ವವಿದ್ಯಾಲಯ ಆರಂಭಿಸಿದ್ದರು. ಆದರೆ ಬಿಜೆಪಿ ಸರಕಾರ ಮಹಿಳಾ ವಿವಿಯನ್ನು ಸಾಮಾನ್ಯ ವಿವಿಯನ್ನಾಗಿ ಮಾಡಬೇಕು ಎನ್ನುತ್ತಿದೆ. ಅಲ್ಲಿನ ಹುದ್ದೆಗಳನ್ನು ತುಂಬದೇ, ಅದನ್ನು ಕೇವಲ ವಿಜಯಪುರ ಜಿಲ್ಲೆಗೆ ಸೀಮಿತ ಮಾಡಬೇಕು ಎಂದು ಅದನ್ನು ಮುಚ್ಚಲು ಪ್ರಯತ್ನಿಸುತ್ತಿದೆ. ಇದು ಬಿಜೆಪಿ ಕೆಲಸವಾಗಿದ್ದು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿಗೆ ಬಿಜೆಪಿ ವಿರುದ್ಧವಾಗಿದೆ ಎಂದು ಟೀಕಿಸಿದರು.

ಕೋವಿಡ್ ಸಮಯದಲ್ಲಿ ಮಾನವೀಯತೆ ಮೆರೆಯಬೇಕಿದ್ದ ಬಿಜೆಪಿ ಸರಕಾರ ಈ ಸಮಯದಲ್ಲಿ ಸಾವಿರಾರು ಕೋಟಿ ಲಪಟಾಯಿಸಿದರು. ಜನರ ಪ್ರಾಣದ ಜತೆ ಚೆಲ್ಲಾಟವಾಡಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಈ ಬಿಜೆಪಿ ಸರಕಾರ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಇಂದು ರಾಜ್ಯ ಸರಕಾರ ಶೇ.40ರಷ್ಟು ಕಮಿಷನ್ ಸರಕಾರ ಆಗಿದೆ. ನಿಮ್ಮ 100 ರೂಪಾಯಿಯಲ್ಲಿ 60 ರೂಪಾಯಿ ಖರ್ಚಾದರೆ 40 ರೂಪಾಯಿ ಅವರಿಗೆ ಲಂಚವಾಗಿ ಹೋಗುತ್ತದೆ.

ಇದನ್ನು ನಾವು ಹೇಳಿದರೆ, ಅದನ್ನು ನಿರ್ಲಕ್ಷಿಸುತ್ತಾರೆ. ಈ ಆರೋಪ ನಾವು ಮಾಡಿದ್ದಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಈ ವಿಚಾರವಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಆದರೆ, ಪ್ರಧಾನಿಗಳು, ಗೃಹ ಸಚಿವರು ಈ ವಿಚಾರದಲ್ಲಿ ಸುಮ್ಮನೆ ಕೂತರೆ ‘ಮೌನಂ ಸಮ್ಮತಿ ಲಕ್ಷಣಂ’ ಎನ್ನುವ ಹಾಗೆ ಆಗುತ್ತದೆ ಎಂದು ಪಾಟೀಲ್ ಹೇಳಿದರು.

ನಾವು ಜಾತಿ ಧರ್ಮ ಮೀರಿ ಕೆಲಸ ಮಾಡಿದ್ದೇವೆ. ಈ ದೇಶ ಎಲ್ಲ ರಂಗದಲ್ಲಿ ಎಲ್ಲ ವರ್ಗದ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ಕಾಂಗ್ರೆಸ್ ಎಂದ ಅವರು, 2023ರಲ್ಲಿ 140-150 ಕ್ಷೇತ್ರ ಗೆದ್ದು ಜನರ ಸೇವೆ ಮಾಡುವಂತಾಗಬೇಕು. ನಾವು ಜನರ ಬದುಕು ಕಟ್ಟುವ ಕೆಲಸ ಮಾಡಿದರೆ, ಅವರು ಜನರ ಭಾವನೆ ಕೆರಳಿಸಿ ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ, ನಾನು ಶಕ್ತಿ ಮೀರಿ ಕಾಂಗ್ರೆಸ್ ಸಾಧನೆ, ಬಿಜೆಪಿ ವೈಫಲ್ಯವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ನುಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ, ಈಶ್ವರಖಂಡ್ರೆ, ಸಲೀಂ ಅಹ್ಮದ್, ಧ್ರುವನಾರಾಯಣ್, ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ನಾಯಕರಾದ ಆರ್.ವಿ. ದೇಶಪಾಂಡೆ, ವೀರಪ್ಪ ಮೊಯ್ಲಿ, ಎಚ್.ಕೆ.ಪಾಟೀಲ್, ಡಾ.ಜಿ. ಪರಮೇಶ್ವರ್, ರಮಾನಾಥ್‍ರೈ, ಯು.ಟಿ.ಖಾದರ್, ಕುಲದೀಪ್ ರಾಯ್, ರೆಹಮಾನ್ ಖಾನ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News