×
Ad

ಪರ್ಸಂಟೇಜ್ ಕೊಡುವುದನ್ನು ನಿಲ್ಲಿಸಿದರೆ ಕಮಿಷನ್ ಪ್ರಕರಣಗಳೂ ನಿಲ್ಲುತ್ತವೆ: ಎಚ್.ಡಿ.ಕುಮಾರಸ್ವಾಮಿ

Update: 2022-03-28 23:24 IST

ಬೆಂಗಳೂರು, ಮಾ.28: ಗುತ್ತಿಗೆದಾರರು ಮೊದಲು ಪರ್ಸಂಟೇಜ್ ಕೊಡುವುದನ್ನು ನಿಲ್ಲಿಸಿದರೆ ಇಂಥ ಕಮಿಷನ್ ಪ್ರಕರಣಗಳು ನಿಲ್ಲುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಲಂಚಕ್ಕೆ ಬೇಡಿಕೆ ಆರೋಪಕ್ಕೆ ಸಂಬಂಧಿಸಿ ಬೆಳಗಾವಿಯ ಗುತ್ತಿಗೆದಾರೊಬ್ಬರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ವಿಚಾರದ ಬಗ್ಗೆ ಅವರು ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.

ರಾಜ್ಯ ಸರಕಾರದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಬಂದಿರುವುದೇ ಕಮಿಷನ್ ವಿಚಾರ. ಈಗ ಹೊರಗೆ ಬರುತ್ತಿರುವ ವಿಷಯಗಳ ಬಗ್ಗೆ ಅಚ್ಚರಿ ಏನೂ ಇಲ್ಲ. ಇದು ಒಂದು ರೀತಿಯ ದಿನನಿತ್ಯದ ಕೆಲಸ ಆಗಿಹೋಗಿದೆ. ಹಿಂದೆ ಸಣ್ಣಪುಟ್ಟ ಮಟ್ಟದಲ್ಲಿ ಇಂಥದ್ದೆಲ್ಲ ನಡೆದುಕೊಂಡು ಹೋಗುತ್ತಿತ್ತು. ಈಗ ಸ್ವಲ್ಪ ದೊಡ್ಡ ಪ್ರಮಾಣಕ್ಕೆ ಏರಿಕೆ ಆಗಿದೆ. ಏಕೆಂದರೆ, ಬಜೆಟ್ ಗಾತ್ರ ಹೆಚ್ಚಾದಂತೆ ಕಮಿಷನ್ ಗಾತ್ರ ಕೂಡ ಹೆಚ್ಚಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಗುತ್ತಿಗೆ ಕೆಲಸ ಮಾಡುವವರು ಇಂಥ ಕೆಲಸಗಳಿಗೆ ಪ್ರೋತ್ಸಾಹ ಕೊಡದನ್ನು ನಿಲ್ಲಸಬೇಕು. ಹಣ, ಕಮಿಷನ್ ಕೊಡುವುದಿಲ್ಲ ಎಂದು ಕಠಿಣ ನಿರ್ಧಾರ ಮಾಡಬೇಕು. ಗುತ್ತಿಗೆದಾರರು ಮೊದಲು ಬಿಗಿಯಾಗಿ ಇದ್ದರೆ ಈ ಸಮಸ್ಯೆಗಳು ಏಕೆ ಬರುತ್ತವೆ ಎಂದು ಅವರು ಹೇಳಿದರು.

ನಾಳೆಯಿಂದ ಸದನದಲ್ಲಿ ಚುನಾವಣಾ ಸುಧಾರಣೆ ಬಗ್ಗೆ  ಚರ್ಚೆ ಮಾಡುತ್ತಿದ್ದಾರೆ. ಎರಡು ದಿನ ಏನು ಚರ್ಚೆ ಮಾಡುತ್ತಾರೋ ನೋಡೋಣ. ಕಮಿಷನ್ ವಿಷಯದ ಚುನಾವಣೆಯಲ್ಲಿ ಬದಲಾವಣೆ ತರುವ ಬಗ್ಗೆ ಏನು ಚರ್ಚೆ ಮಾಡುತ್ತಾರೆ. ಕಮಿಷನ್ ವಿಚಾರ ಎನ್ನುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ದೊಡ್ಡ ಚರ್ಚೆ ಏಕೆ? ನಮ್ಮ ಜನರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಲ್ಲುವುದಿಲ್ಲ. ಜನರಿಗೆಲ್ಲ ಇದು ಗೊತ್ತಿರುವ ವಿಚಾರವೇ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಈ ಬಗ್ಗೆ ಚರ್ಚೆ ಮಾಡಲು ನನಗೆ ಆಸಕ್ತಿ ಇಲ್ಲ. ಜನರು ಈ  ಬಗ್ಗೆ ಮೊದಲ ತಿಳಿದುಕೊಳ್ಳಬೇಕು. ಈಗಲಾದರೂ ಗುತ್ತಿಗೆದಾರರು ಎಲ್ಲರೂ ಸೇರಿ ಕಮಿಷನ್ ಕೊಡಬಾರದು ಎನ್ನುವ ನಿರ್ಧಾರ ಮಾಡಿ. ಲಂಚ ಕೇಳಿದರೆ ಕೆಲಸವನ್ನೆ ಮಾಡಬೇಡಿ, ನಿಲ್ಲಸಿ. ಅದರಿಂದ ಏನೂ ಆಗಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಯಾರು ಇದ್ದೀರಿ, ಅವರು ಈ ಕೆಲಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

40 ಪಸರ್ಂಟೇಜ್ ಅಂತ ಎಲ್ಲರೂ ಹೇಳುತ್ತಾರೆ. ಆದರೆ, ನೀವು ಮೊದಲು ನಾವು ಯಾವುದೇ ಕೆಲಸ ಮಾಡಲ್ಲ, ಕಮಿಷನ್ ಕೊಡಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ಕೊಡಿ. ಆಗ ಎಲ್ಲವೂ ಸರಿ ಹೋಗುತ್ತದೆ. ನೀವೇ ಪ್ರೋತ್ಸಾಹ ನೀಡಿದರೆ ಇದು ಹೀಗೆ ಇರುತ್ತದೆ. ಅದು ಬಿಟ್ಟು ಬರೀ ಚರ್ಚೆ ಮಾಡಿದರೆ ಪ್ರಯೋಜನ ಇಲ್ಲ ಎಂದು ಅವರು ಗುತ್ತಿಗೆದಾರರಿಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News