ತೈಲೋತ್ಪನ್ನಗಳ ಬೆಲೆ ಏರಿಕೆಗೆ ಸರಕಾರವೇ ಕಾರಣ

Update: 2022-03-29 04:22 GMT

ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ ಪೆಟ್ರೋಲ್, ಡೀಸೆಲ್ ಹಾಗೂ ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಸತತವಾಗಿ ಹೆಚ್ಚಿಸಲಾಗುತ್ತಿದೆ. ಏಳು ವರ್ಷಗಳ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಸರಕಾರವಿದ್ದಾಗ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಹತ್ತು ಪೈಸೆ ಹೆಚ್ಚಾದರೆ ಭಾರತದ ತುಂಬಾ ಭಾರೀ ಪ್ರತಿಭಟನೆ ವ್ತಕ್ತವಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆ ಊಹಿಸಲಾಗದಷ್ಟು ಜಾಸ್ತಿಯಾದರೂ ಸದಾ ಗೊಣಗಾಡುವ ಮಧ್ಯಮ ವರ್ಗದ ಸೂಕ್ಷ್ಮ ಜೀವಿಗಳು ಈ ಬಗ್ಗೆ ಮಾತಾಡುವುದಿಲ್ಲ. ಬೆಲೆ ಏರಿಕೆಯ ಬದಲಾಗಿ ಹಿಜಾಬ್, ಕಾಶ್ಮೀರ್ ಫೈಲ್, ಲವ್ ಜಿಹಾದ್ ಮೊದಲಾದ ವಿಷಯಗಳ ಬಗ್ಗೆ ದಿನವಿಡೀ ಮಾತನಾಡುತ್ತಲೇ ಈ ಜನ ಕಾಲಹರಣ ಮಾಡುತ್ತ ಮೋದಿ ನಾಮ ಸ್ಮರಣೆಯಲ್ಲಿ ತೊಡಗಿದ್ದಾರೆ.

ಕಳೆದ ಕೆಲವು ಸಮಯದಿಂದ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪ್ರತಿದಿನ ಹೆಚ್ಚಿಸುವ ಹೊಸ ಪರಿಪಾಠವಿತ್ತು. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವುದರಿಂದ ಅದಕ್ಕೆ ಅನ್ವಯಿಸಿ ದೇಶಿ ಮಾರುಕಟ್ಟೆ ಬೆಲೆ ಏರಿಕೆ ಅನಿವಾರ್ಯ ಎಂದು ಸರಕಾರ ಸಬೂಬು ಹೇಳುತ್ತಿತ್ತು. ಆದರೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಬಂದಾಗ ನಾಲ್ಕು ತಿಂಗಳ ಕಾಲ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅತ್ಯಂತ ಎಚ್ಚರದಿಂದ ಸ್ಥಿರತೆಯನ್ನು ಕಾಯ್ದು ಕೊಳ್ಳಲಾಯಿತು. ಈ ಕಾಲಾವಧಿಯಲ್ಲಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ವ್ಯತ್ಯಾಸ ಉಂಟಾದರೂ ದೇಶಿ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲಾಯಿತು. ಇದಕ್ಕೆ ಕಾರಣವೇನೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

 ಒಕ್ಕೂಟ ಸರಕಾರದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ಪಕ್ಷ. ಹಾಗಾಗಿಯೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದೆ. ಆದರೆ ಚುನಾವಣೆ ಬಂದಾಗ ಮಾತ್ರ ತೈಲೋತ್ಪನ್ನಗಳ ಬೆಲೆಯನ್ನು ನಿಯಂತ್ರಿಸಲಾಗುತ್ತದೆ. ಬೆಲೆ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ. ಇದು ಪ್ರಜೆಗಳಿಗೆ ಮಾಡುವ ಮೋಸವಲ್ಲದೆ ಬೇರೇನೂ ಅಲ್ಲ.

ಕೋವಿಡ್ ಸಾಂಕ್ರಾಮಿಕ ವ್ಯಾಪಕವಾಗಿ ಹರಡಿದಾಗ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ವಿಪರೀತವಾಗಿ ಕುಸಿಯುತು. ಆದರೆ ಅದರ ಲಾಭವನ್ನು ಮೋದಿ ಸರಕಾರ ಜನರಿಗೆ ವರ್ಗಾಯಿಸಲಿಲ್ಲ. ಯಾಕೆ ವರ್ಗಾಯಿಸಲಿಲ್ಲ ಎಂದು ಜನರೂ ಕೇಳಲಿಲ್ಲ. ಪ್ರತಿಪಕ್ಷಗಳು ಸಾಂಕೇತಿಕ ಪ್ರತಿಭಟನೆಯನ್ನೂ ಮಾಡಲಿಲ್ಲ.

 ಕಳೆದ ಒಂದು ವರ್ಷದ ಕಾಲಾವಧಿಯಲ್ಲಿ ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ರೂ.150ರಷ್ಟು ಜಾಸ್ತಿಯಾಗಿದೆ. ಹಿಂದೆ ನೀಡುತ್ತಿದ್ದ ಸಬ್ಸಿಡಿ ಮೊತ್ತದ ವರ್ಗಾವಣೆಯೂ ಸ್ಥಗಿತ ಗೊಂಡಿದೆ. 2020ರ ಮೇ ತಿಂಗಳ ನಂತರ ಸಬ್ಸಿಡಿಯನ್ನು ಹೇಳದೆ ಕೇಳದೆ ನಿಲ್ಲಿಸಲಾಗಿದೆ. ಸರಕಾರದಿಂದ ಒಂದೇ ಒಂದು ಅಧಿಕೃತ ಪ್ರಕಟನೆ ಬಂದಿಲ್ಲ. ಬೆಲೆ ಏರಿಕೆಯ ಈ ದಿನಗಳಲ್ಲಿ ಜನಸಾಮಾನ್ಯರಿಗೆ ಆಸರೆಯಾಗಿದ್ದ ಅಡುಗೆ ಅನಿಲದ ಸಬ್ಸಿಡಿಯನ್ನು ಏಕಾಏಕಿ ನಿಲ್ಲಿಸಿದ್ದು ಏಕೆ ಎಂಬ ಬಗ್ಗೆ ಸರಕಾರ ಏನನ್ನೂ ಹೇಳದೆ ಮೌನವಾಗಿರುವುದು ಸರಿಯಲ್ಲ. ಈಗ ಹಿಂದೆಂದೂ ಪಾವತಿ ಮಾಡದ ದುಬಾರಿ ಬೆಲೆಯನ್ನು ತೆತ್ತು ಗ್ರಾಹಕರು ಸಿಲಿಂಡರ್ ಪಡೆಯುತ್ತಿದ್ದಾರೆ. ಇನ್ನು ಪೆಟ್ರೋಲ್, ಡೀಸೆಲ್ ಮುಂತಾದವುಗಳ ಬೆಲೆ ಇಳಿಯುವ ಸೂಚನೆಗಳು ಸದ್ಯಕ್ಕಂತೂ ಕಾಣುತ್ತಿಲ್ಲ. ಇದರ ಪರಿಣಾಮವಾಗಿ ಹಣದುಬ್ಬರ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

ಅಡುಗೆ ಅನಿಲ ಸೇರಿದಂತೆ ತೈಲೋತ್ಪನ್ನಗಳ ಬೆಲೆಯನ್ನು ಇಳಿಸುವ ಇಲ್ಲವೇ ಹೆಚ್ಚಿಸುವ ಅಧಿಕಾರ ಮಾರುಕಟ್ಟೆಯ ಕೈಯಲ್ಲಿ ಇಲ್ಲ. ಅದು ಇರುವುದು ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರಕಾರದ ಕೈಯಲ್ಲಿ ಎಂಬುದು ಇತ್ತೀಚಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲರಿಗೂ ಗೊತ್ತಾಗಿದೆ. ಆದ್ದರಿಂದ ಸರಕಾರ ತೈಲೋತ್ಪನ್ನಗಳ ಬೆಲೆ ಇಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯಿಂದ ಸಾರ್ವಜನಿಕರ ದೈನಂದಿನ ಬದುಕು ಅಸಹನೀಯವಾಗಿದೆ. ಅದರಲ್ಲೂ ಮುಖ್ಯವಾಗಿ ಕಡಿಮೆ ಆದಾಯ ಹೊಂದಿರುವ ಜನಸಾಮಾನ್ಯರ ತಿಂಗಳ ಖರ್ಚು ವೆಚ್ಚಗಳ ಮೇಲೆ ವಿಪರೀತ ಒತ್ತಡ ಬೀಳುತ್ತದೆ.

ಮೋದಿ ಸರಕಾರಕ್ಕೆ ಇದೆಲ್ಲ ಗೊತ್ತಿಲ್ಲವೆಂದಲ್ಲ. ಕಾರ್ಪೊರೇಟ್ ಕಂಪೆನಿಗಳಿಗೆ ರಿಯಾಯಿತಿ ಮೇಲೆ ರಿಯಾಯಿತಿ ನೀಡುವ ಸರಕಾರ ಜನಸಾಮಾನ್ಯರ ಅಡುಗೆ ಅನಿಲದ ಮೇಲಿನ ಸಬ್ಸಿಡಿ ರದ್ದು ಮಾಡಬಾರದಿತ್ತು. ಜನಸಾಮಾನ್ಯರು ಬೆಲೆ ಏರಿಕೆಯ ಬಗ್ಗೆ ಅಸಮಾಧಾನದಿಂದ ಮಾತಾಡಬಾರದೆಂದು ಅವರನ್ನು ನಿರಂತರವಾಗಿ ಕೋಮು ವಿಭಜನೆಯ ಉದ್ರೇಕಕಾರಿ ಕಲಹಗಳಲ್ಲಿ ಮುಳುಗಿಸಿ ಚುನಾವಣಾ ಗೆಲುವನ್ನು ಸಲೀಸಾಗಿ ಪಡೆಯುವ ರಾಜಕಾರಣ ಬಹಳ ದಿನ ನಡೆಯುವುದಿಲ್ಲ ಎಂಬುದನ್ನು ಅಧಿಕಾರದಲ್ಲಿರುವವರು ಅರ್ಥ ಮಾಡಿಕೊಳ್ಳಬೇಕು.

 ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಾಗಲೂ ಅದರ ಪ್ರಯೋಜನ ಜನಸಾಮಾನ್ಯರಿಗೆ ಸಿಗದಿರಲು ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ತೆರಿಗೆ ನೀತಿ ಕಾರಣ. ಜಿಎಸ್‌ಟಿ ಬಂದ ನಂತರ ರಾಜ್ಯ ಸರಕಾರಗಳ ಆದಾಯ ಮೂಲವೂ ಕ್ಷೀಣಿಸಿದೆ. ಈ ತೆರಿಗೆ ನೀತಿಯಲ್ಲಿ ಬದಲಾವಣೆ ಮಾಡಿದರೆ ಮಾತ್ರ ತೈಲೋತ್ಪನ್ನಗಳ ಬೆಲೆ ನಿಯಂತ್ರಣಕ್ಕೆ ಬಂದು ಜನಸಾಮಾನ್ಯರು ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗುತ್ತದೆ.

ಪೆಟ್ರೋಲ್ ಮತ್ತು ಡಿಸೇಲ್ ಹಾಗೂ ಮದ್ಯಗಳು ರಾಜ್ಯ ಸರಕಾರಗಳ ಮುಖ್ಯ ಆದಾಯ ಮೂಲಗಳಾಗಿವೆ. ಜಿಎಸ್‌ಟಿ. ವ್ಯವಸ್ಥೆ ಜಾರಿಗೆ ಬಂದ ನಂತರವೂ ಈ ಉತ್ಪನ್ನಗಳನ್ನು ಅದರ ವ್ಯಾಪ್ತಿಯಿಂದ ಹೊರಗೆ ಇರಿಸಲಾಗಿದೆ. ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ರಾಜ್ಯಗಳ ವರಮಾನ ಮೂಲಗಳಿಗೆ ಪೆಟ್ಟು ಬೀಳುತ್ತದೆ. ಹೀಗಾಗಿ ರಾಜ್ಯಗಳು ಈ ಪ್ರಸ್ತಾವನೆಯನ್ನು ವಿರೋಧಿಸುತ್ತಿವೆ. ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳು ತೈಲೋತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತ ಮಾಡದಿದ್ದರೆ ಇಂಧನ ಬೆಲೆಯನ್ನು ಕಡಿತ ಮಾಡಲು ಸಾಧ್ಯವಿಲ್ಲ. ಇಂಧನ ಬೆಲೆ ಕಡಿಮೆಯಾಗದಿದ್ದರೆ ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ.

ತೈಲೋತ್ಪನ್ನಗಳ ಬೆಲೆ ನಿಯಂತ್ರಣ ಕುರಿತಂತೆ ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವೆ ಹೊಂದಾಣಿಕೆ ಇಲ್ಲ. ತಾನು ಸುಂಕ ಕಡಿಮೆ ಮಾಡಿದರೂ ರಾಜ್ಯ ಸರಕಾರಗಳು ಕಡಿಮೆ ಮಾಡುತ್ತಿಲ್ಲ ಇದರಿಂದಾಗಿ ತೈಲೋತ್ಪನ್ನಗಳ ಬೆಲೆ ದುಬಾರಿಯಾಗಿದೆ ಎಂಬುದು ಒಕ್ಕೂಟ ಸರಕಾರದ ವಾದ. ಜಿಎಸ್‌ಟಿ ಬಂದ ನಂತರ ತಮಗೆ ಬೇರೆ ಆದಾಯ ಮೂಲವಿಲ್ಲ ಎಂಬುದು ರಾಜ್ಯಗಳ ವಾದ. ಹೀಗಾಗಿ ಇಂಧನ ಬೆಲೆ ಏರಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಕುರಿತು ಒಕ್ಕೂಟ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವೆ ಒಂದು ಹೊಂದಾಣಿಕೆಯ ಸೂತ್ರ ರೂಪುಗೊಳ್ಳಬೇಕು. ಆಗ ಮಾತ್ರ ಬೆಲೆ ಇಳಿದು ಜನ ನೆಮ್ಮದಿಯಿಂದ ಉಸಿರಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News