ಮದ್ದೂರು | ಕೊಂಡೋತ್ಸವ ವೀಕ್ಷಣೆ ವೇಳೆ ಮನೆ ಮೇಲ್ಛಾವಣಿ ಕುಸಿದು ಮಹಿಳೆ ಮೃತ್ಯು; 40 ಮಂದಿಗೆ ಗಾಯ

Update: 2022-03-29 04:52 GMT

ಮಂಡ್ಯ, ಮಾ.29: ಮನೆಯ ಮೇಲ್ಛಾವಣಿ ಕುಸಿದು ಓರ್ವ ಮಹಿಳೆ ಸಾವನ್ನಪ್ಪಿದ್ದು, ಸುಮಾರು 40 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.

ಜನರು ಮನೆಯ ಮೇಲ್ಛಾವಣಿ ಏರಿ ಗ್ರಾಮದ ಬಸವೇಶ್ವರಸ್ವಾಮಿ ದೇವರ ಕೊಂಡೋತ್ಸವ ವೀಕ್ಷಣೆ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಹುಲಿಗೆರೆಪುರ ಗ್ರಾಮದ ದ್ಯಾವರಸ ಅವರ ಪತ್ನಿ ಪುಟ್ಟಲಿಂಗಮ್ಮ(40) ಮೃತಪಟ್ಟ ಮಹಿಳೆಯಾಗಿದ್ದು, ಗಾಯಗೊಂಡವರನ್ನು ಮದ್ದೂರು ಮತ್ತು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಸೋಮವಾರ ತಡರಾತ್ರಿ ಬಂಡಿ ಉತ್ಸವ ಹಾಗೂ ಇನ್ನಿತರ ಪೂಜಾ ವಿಧಿವಿಧಾನಗಳು ನೆರವೇರಿದ ಬಳಿಕ ಮಂಗಳವಾರ ಮುಂಜಾನೆ ಗ್ರಾಮದ ಶ್ರೀ ಬಸವೇಶ್ವರ ಕೊಂಡೋತ್ಸವವನ್ನು ನಡೆಯುತ್ತಿತ್ತು. ಇದನ್ನು  ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ ನೂರಾರು ಮಂದಿ ಪಟೇಲ್ ಸಿದ್ದೇಗೌಡ ಎಂಬವರಿಗೆ ಸೇರಿದ ಮನೆಯ ಮೇಲ್ಛಾವಣಿ ಏರಿದಾಗ ಭಾರಕ್ಕೆ ಛಾವಣಿ ಕುಸಿದಿದೆ ಎನ್ನಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸ್ಥಳಕ್ಕೆ ಭೇಟಿ ನೀಡಲು ಆಗಮಿಸುತ್ತಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News